ಬೆಂಗಳೂರು: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಸಾವನ್ನಪ್ಪಿದ್ದಾನೆಯೇ? ಹೀಗೊಂದು ಸುದ್ದಿ ಈಗ ಹರಿದಾಡುತ್ತಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ನಿತ್ಯಾನಂದ ಸ್ವಾಮಿ ಬಿಡದಿ ಬಳಿ ಆಶ್ರಮದಲ್ಲಿದ್ದ. ಈ ವೇಳೆ ಆತನ ಮೇಲೆ ರೇಪ್, ವಂಚನೆ ಇತ್ಯಾದಿ ಹಲವು ಕೇಸ್ ದಾಖಲಾಗಿದ್ದವು. ಬಳಿಕ ಆತ ಭಾರತವನ್ನು ತೊರೆದು ದ್ವೀಪವೊಂದನ್ನು ಖರೀದಿ ಮಾಡಿ ಅದಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದಾನೆ ಎಂದು ಸುದ್ದಿಯಾಗಿತ್ತು. ಅಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದ ಆತ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ.
ಇದೀಗ ನಿತ್ಯಾನಂದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದಾನೆ ಎಂಬ ವದಂತಿ ಹಬ್ಬಿದೆ. ಇದಕ್ಕೆ ಕಾರಣವಾಗಿದ್ದ ಆತನ ಸಹೋದರಿಯ ಮಗ ಸುಂದರೇಶ್ವರನ್ ವಿಡಿಯೋ. ಸುಂದರೇಶ್ವರನ್ ವಿಡಿಯೋ ಮೂಲಕ ಇಂತಹದ್ದೊಂದು ಮಾಹಿತಿ ನೀಡಿದ್ದಾನೆ.
ಆದರೆ ಇದು ಎಷ್ಟರಮಟ್ಟಿಗೆ ನಿಜ ಎನ್ನುವುದು ಗೊತ್ತಾಗಿಲ್ಲ. ಏಪ್ರಿಲ್ ಫೂಲ್ ಡೇ ನಿಮಿತ್ತ ಈ ರೀತಿ ಸುಳ್ಳು ಸುದ್ದಿ ಹಬ್ಬಲಾಗಿದೆಯೇ ಎನ್ನುವುದು ಖಚಿಪತಟ್ಟಿಲ್ಲ. ಕೆಲವು ದಿನಗಳ ಹಿಂದೆ ನಿತ್ಯಾನಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ಸುದ್ದಿಯಾಗಿತ್ತು. ಈಗ ಸಾವಿನ ವದಂತಿ ಹರಡಿದೆ.