ಬೆಂಗಳೂರು: ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ನೆರೆಹಾನಿ ಪ್ರದೇಶಗಳ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿರುವುದರಿಂದ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದ್ದು, ನೆರೆಹಾನಿಯಿಂದ ಜನಸಾಮಾನ್ಯರು ಸಹ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೆರವಿಗೆ ಧಾವಿಸದೆ, ಪರಿಹಾರಗಳನ್ನು ಒದಗಿಸಿದೆ ನಿರ್ಲಕ್ಷ್ಯವಹಿಸಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗಿದ್ದು, ಬೆಳೆ ಹಾನಿ, ಮನೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆಂದು ಹೇಳಿದ್ದಾರೆ.
ಕರ್ನಾಟಕದ ಕಿತ್ತೂರು, ಕಲ್ಯಾಣ ಕರ್ನಾಟಕ, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಸುಮಾರು ಶೇ.34 ರಷ್ಟು ಅಧಿಕ ಮಳೆಯಾಗಿದ್ದು, ಬೆಳೆ ನಾಶವಾಗಿದ್ದು, ಆದರೂ ಸಿಎಂ, ಡಿಸಿಎಂ ಸೇರಿದಂತೆ ಯಾವುದೇ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಅಥವಾ ಯಾವುದೇ ಹೇಳಿಕೆ ನೀಡಿಲ್ಲ.