ಮೈಸೂರು: ಧರ್ಮಸ್ಥಳ ಯಾತ್ರೆ, ಮೈಸೂರು ಚಲೋ ಯಾತ್ರೆಗಳಿಂದ ಬಿಜೆಪಿಗೆ ಯಾವುದೇ ರಾಜಕೀಯ ಲಾಭ ಸಿಗದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸ್ವಗ್ರಾಮವಾದ ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿಯಲ್ಲಿ ಸೋಮವಾರ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.
ಬಿಜೆಪಿ ನಡೆಸುತ್ತಿರುವ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಈ ಯಾತ್ರೆಗಳಿಂದ ರಾಜಕೀಯ ಲಾಭ ಸಿಗುತ್ತದೆ ಎಂದು ಭಾವಿಸಿದ್ದಾರೆ. ಎಸ್ಐಟಿ ರಚಿಸಿದಾಗ ವಿರೋಧ ಮಾಡದೆ ಇದ್ದವರು, ನಂತರದಲ್ಲಿ ಏನೂ ಸಿಗುವುದಿಲ್ಲ ಎಂದು ತಿಳಿದು ವಿರೋಧಿಸುತ್ತಿದ್ದಾರೆ. ಇದು ಢೋಂಗಿತನ ಎಂದು ಟೀಕೆ ಮಾಡಿದರು.
ಯಾತ್ರೆಯಿಂದ ಹಿಂದುತ್ವ ಗಟ್ಟಿಯಾಗುತ್ತದೆ ಎಂದು ಬಿಜೆಪಿಯವರು ತಿಳಿದಿದ್ದಾರೆ. ನಾನೂ ಕೂಡ ಹಿಂದೂವೇ. ನಮ್ಮೂರಿನಲ್ಲಿ ರಾಮಮಂದಿರ ಕಟ್ಟಿದ್ದೇವೆ. ಹಿಂದುಗಳೆಂದರೆ ರಾಜಕೀಯ, ಅಪಪ್ರಚಾರ ಮಾಡುವುದಲ್ಲ, ಸುಳ್ಳು ಹೇಳುವುದಲ್ಲ. ಯಾರೇ ಆದರೂ ಮನಷ್ಯತ್ವವಿರಬೇಕು ಎಂದು ಆಕ್ರೋಶ ಹೊರಹಾಕಿದರು.
ದಸರಾ ಹಬ್ಬದಲ್ಲೂ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಬಾನು ಮುಷ್ತಾಕ್ ಅವರಿಗೆ ಬುಕರ್ ಪ್ರಶಸ್ತಿ ದೊರಕಿದ್ದು, ಎಷ್ಟು ಜನಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದು ಪ್ರಶ್ನಿಸಿದ ಅವರು, ದಸರಾ ಮೇಲೆ ರಾಜಕಾರಣ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ದಸರಾ ಹಬ್ಬ ನಾಡ ಹಬ್ಬವಲ್ಲವೇ? ನಾಡ ಹಬ್ಬ ಎಂದರೆ ಎಲ್ಲರೂ ಸೇರಿ ಮಾಡುವುದು. ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು, ಬೌದ್ಧರು ಸೇರಿ ಆಚರಿಸುವ ಹಬ್ಬ ಎಂದರು.