ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಯ ವೇಳೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತ ದುರಂತದ ಬಗ್ಗೆ ಆರ್‌ಸಿಬಿ ತಂಡದ ತಾರೆ ವಿರಾಟ್ ಕೊಹ್ಲಿ ಮೂರು ತಿಂಗಳ ಬಳಿಕ ಮೌನ ಮುರಿದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟರೆ, ಹಲವು ಮಂದಿ ಗಾಯಗೊಂಡಿದ್ದರು. ಈ ಬಗ್ಗೆ ಕೊಹ್ಲಿ ಭಾವುಕ ಸಂದೇಶವನ್ನು ಹಂಚಿದ್ದಾರೆ.
ಕಾಲ್ತುಳಿತದ ದುರಂತ ಬಳಿಕ ಕೊಹ್ಲಿ ಅವರಿಂದ ದಾಖಲಾದ ಮೊದಲ ವಿಸ್ತೃತ ಹೇಳಿಕೆ ಇದಾಗಿದೆ. ಕೊಹ್ಲಿ ಪ್ರತಿಕ್ರಿಯೆ ನೀಡದಿರುವ ಬಗ್ಗೆ ವ್ಯಾಪಕ ಟೀಕೆಗಳು ಬಂದಿದ್ದವು. ಮೂರು ತಿಂಗಳ ಬಳಿಕ ಹೇಳಿಕೆ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4ರಂದು ಕಾಲ್ತುಳಿತ ಪ್ರಕರಣ ನಡೆದಿತ್ತು. ಆರ್‌ಸಿಬಿ ವಿಜಯೋತ್ಸವ ಆಚರಿಸಲು ಪ್ರದೇಶದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು.
ಈ ಸಂಬಂಧ ಕೊಹ್ಲಿ ಸಂದೇಶವನ್ನು ಆರ್‌ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ಸಂತೋಷದಾಯಕ ಕ್ಷಣವು ದುರಂತವಾಗಿ ಬದಲಾಯಿತು ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂದು ನಡೆದ ಹೃದಯ ವಿದ್ರಾವಕ ಘಟನೆಗೆ ಬದುಕು ನಿಜವಾಗಿಯೂ ನಿಮ್ಮನ್ನು ಸಿದ್ಧಪಡಿಸಿರುವುದಿಲ್ಲ. ಯಾವ ಕ್ಷಣ ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದಾಯಕವಾಗಿರಬೇಕಿತ್ತೋ ಅದು ದುರಂತಮಯವಾಗಿ ಪರಿಣಮಿಸಿತ್ತು ಎಂದು ಕೊಹ್ಲಿ ಹೇಳಿದ್ದಾರೆ.