ಲಂಡನ್: ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಬೇಕಾದರೆ ವಿರಾಟ್ ಕೊಹ್ಲಿ ಫಿಟ್ನೆಸ್ ಟೆಸ್ಟ್ ಪರೀಕ್ಷೆಗೊಳಪಡಬೇಕು. ಆದರೆ ಸದ್ಯಕ್ಕೆ ಲಂಡನ್ ವಾಸಿಯಾಗಿರುವ ಕೊಹ್ಲಿಗೆ ಬಿಸಿಸಿಐ ಸ್ಪೆಷಲ್ ಸೌಲಭ್ಯ ನೀಡಲು ಮುಂದಾಗಿದೆ.
ಟೆಸ್ಟ್ ಮತ್ತು ಟಿ20 ಮಾದರಿಯಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಈಗ ಏಕದಿನ ಪಂದ್ಯದಲ್ಲಿ ಮಾತ್ರ ಆಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಆಡಿದ್ದೇ ಕೊನೆ. ಇದಾದ ಬಳಿಕ ಈಗ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಅವರು ಕಮ್ ಬ್ಯಾಕ್ ಮಾಡಬೇಕಿದೆ.
ಆದರೆ ಕಮ್ ಬ್ಯಾಕ್ ಮಾಡಲು ಅವರು ಅನಿವಾರ್ಯವಾಗಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿಕೊಳ್ಳಬೇಕು. ಈಗಾಗಲೇ ರೋಹಿತ್ ಶರ್ಮಾ ಸೇರಿದಂತೆ ಅನೇಕ ಕ್ರಿಕೆಟಿಗರು ಬೆಂಗಳೂರಿಗೆ ಬಂದು ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿಸಿಕೊಂಡಿದ್ದಾರೆ.
ಆದರೆ ವಿರಾಟ್ ಕೊಹ್ಲಿ ಈಗ ಲಂಡನ್ ವಾಸಿ. ಹೀಗಾಗಿ ಅವರಿಗೆಂದೇ ಬಿಸಿಸಿಐ ವಿಶೇಷ ಸವಲತ್ತು ನೀಡಲು ಮುಂದಾಗಿದೆ. ಯಾರಿಗೂ ಇಲ್ಲದ್ದು ಕೊಹ್ಲಿಗೆ ಮಾತ್ರ ಲಂಡನ್ ನಲ್ಲಿಯೇ ಫಿಟ್ನೆಸ್ ಪರೀಕ್ಷೆಗೊಳಪಡಲು ಅವಕಾಶ ನೀಡಿದೆ. ಇದೇ ಮೊದಲ ಬಾರಿಗೆ ಒಬ್ಬ ಕ್ರಿಕೆಟಿಗನಿಗೆ ಭಾರತದ ಹೊರಗೆ ಫಿಟ್ನೆಸ್ ಪರೀಕ್ಷೆಗೆ ಅವಕಾಶ ಸಿಗುತ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಕೊಹ್ಲಿಗೆ ಮಾತ್ರ ಯಾಕೆ ಈ ವಿಶೇಷ ಸವಲತ್ತು? ಭಾರತಕ್ಕೆ ಬರಲು ಅಷ್ಟೊಂದು ಅಲರ್ಜಿಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.