ಕೋಲ್ಕತ್ತ: ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿಯೊಬ್ಬ 51 ದಿನ ಜೈಲಿನಲ್ಲಿ ಕಳೆದ ಬಳಿಕ ದೂರುದಾರ ಮಹಿಳೆ ಇದೀಗ ಉಲ್ಟಾ ಹೊಡೆದಿರುವ ಘಟನೆ ಕೋಲ್ಕತ್ತದಲ್ಲಿ ವರದಿಯಾಗಿದೆ. ಮನಸ್ತಾಪದಿಂದಾಗಿ ದೂರು ದಾಖಲಿಸಿರುವುದಾಗಿ ಹೇಳಿಕೊಂಡ ಬೆನ್ನಲ್ಲೇ ನ್ಯಾಯಾಲಯವು ಆಪಾದಿತ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ.
ಘಟನೆ ಹಿನ್ನೆಲೆ:
2020ರ ನವೆಂಬರ್ 24ರಂದು ದಾಖಲಾಗಿದ್ದ ಪ್ರಕರಣದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು. ನ್ಯಾಯಾಲಯವು ಆತನಿಗೆ ಜಾಮೀನು ನೀಡುವವರೆಗೆ 51 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.
2017ರಿಂದ ತಾನು ಆ ವ್ಯಕ್ತಿಯೊಂದಿಗೆ ಸ್ನೇಹ ಹೊಂದಿದ್ದೇನೆ, ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ, ಹೊಟೇಲ್‌ವೊಂದರಲ್ಲಿ ನಾವು ರಾತ್ರಿ ಕಳೆದಿದ್ದೆವು. ಈ ವೇಳೆ ಆತ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ ಮಾರನೇ ದಿನ ಆತ ನನ್ನನ್ನು ಮದುವೆಯಾಗುವುದಿಲ್ಲ ಎಂದು ನಿರಾಕರಿಸಿ, ಓಡಿ ಹೋಗಿದ್ದಾನೆ.
ಎಫ್‌ಐಆರ್ ಆಧಾರದ ಮೇಲೆ ವ್ಯಕ್ತಿಯನ್ನು 2020ರ ನವೆಂಬರ್ 25ರಂದು ಬಂಧಿಸಲಾಗಿತ್ತು. 2021ರ ಜನವರಿಯಲ್ಲಿ ಜಾಮೀನು ಸಿಕ್ಕಿತ್ತು.
ತನಿಖೆ ವೇಳೆ ಮಹಿಳೆ, ಆ ವ್ಯಕ್ತಿ ಜೊತೆಗಿನ ಮನಸ್ತಾಪದಿಂದ ದೂರು ನೀಡಿದ್ದೇನೆ. ಬೇರೆ ಏನೂ ನನಗೆ ನೆನಪಿಲ್ಲ ಎಂದಿದ್ದಾರೆ. ದೂರಿನ ಪ್ರತಿಯನ್ನು ನನ್ನ ಸ್ನೇಹಿತ ಬರೆದಿದ್ದು, ಅದರಲ್ಲಿ ಏನಿದೆ ಎಂದು ನನಗೆ ತಿಳಿದಿರಲಿಲ್ಲ. ಸಹಿ ಹಾಕಿದೆ ಎಂದಿದ್ದಾರೆ.
ಇಬ್ಬರೂ ಒಪ್ಪಿಗೆ ಮೇರೆಗೆ ಲೈಂಗಿಕ ಸಂಬಂಧ ಬೆಳೆಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನೀಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.