Select Your Language

Notifications

webdunia
webdunia
webdunia
webdunia

ರಣಮಳೆಗೆ ನರಕಸದೃಶವಾದ ಹಿಮಾಚಲ ಪ್ರದೇಶ‌: ಸಾವಿರಾರು ರಸ್ತೆಗಳ ಸಂಪರ್ಕ ಕಡಿತ

Heavy rains in Himachal Pradesh, landslides in Jangambagh, rescue operations

Sampriya

ಶಿಮ್ಲಾ , ಬುಧವಾರ, 3 ಸೆಪ್ಟಂಬರ್ 2025 (14:27 IST)
Photo Credit X
ಶಿಮ್ಲಾ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ‌ಹಿಮಾಚಲ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ. ಮಂಡಿ ಜಿಲ್ಲೆಯ ಸುಂದರನಗರ ಉಪವಿಭಾಗದಲ್ಲಿರುವ ಜಂಗಂಬಾಗ್‌ನಲ್ಲಿ ಎರಡು ಮನೆಗಳ ಮೇಲೆ ಭೂಕುಸಿತವಾಗಿದ್ದು, ಒಂದೇ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಒಟ್ಟು ಆರು ಮಂದಿ ಬಲಿಯಾಗಿದ್ದಾರೆ.

35 ವರ್ಷದ ಗುರುಪ್ರೀತ್ ಸಿಂಗ್, ಅವರ ಪತ್ನಿ ಭಾರತಿ (30), ಅವರ ಮೂರು ವರ್ಷದ ಮಗಳು ಕಿರಾತ್, ಶಾಂತಿ ದೇವಿ (70), ಮತ್ತು ಸುರೇಂದರ್ ಕೌರ್ (56) ಎಂದು ಮೃತರು ಗುರುತಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ರಾಹಿಲ್ ಕೂಡ ತನ್ನ ವಾಹನದಲ್ಲಿ ತೆರಳುತ್ತಿದ್ದಾಗ ಭೂಕುಸಿತದಲ್ಲಿ ಸಿಲುಕಿಕೊಂಡಿದ್ದು, ಇನ್ನೂ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.  

ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಏಳು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,155 ರಸ್ತೆಗಳು ಇನ್ನೂ ಸಂಪರ್ಕ ಕಡಿತಗೊಂಡಿವೆ. ಭಾರಿ ಮಳೆ ಹಿನ್ನೆಲೆ ಶಿಮ್ಲಾ, ಕಾಂಗ್ರಾ ಮತ್ತು ಸಿರಮೌರ್ ಜಿಲ್ಲೆಗಳಲ್ಲಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

ರಾತ್ರಿಯಿಡೀ ಫ್ಲಡ್‌ಲೈಟ್‌ಗಳ ಅಡಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮತ್ತು ಸ್ಥಳೀಯ ಪೊಲೀಸರ ತಂಡಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. 

ಹವಾಮಾನ ವೈಪರೀತ್ಯದ ಹೊರತಾಗಿಯೂ, ರಕ್ಷಣಾ ಕಾರ್ಯಕರ್ತರು ಅವಶೇಷಗಳನ್ನು ತೆರವುಗೊಳಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಬೆಟ್ಟದ ಇಳಿಜಾರು ಅಸ್ಥಿರವಾಗಿರುವುದರಿಂದ, ಮತ್ತಷ್ಟು ಭೂಕುಸಿತಗಳ ಭೀತಿಯಿಂದಾಗಿ, ಮುನ್ನೆಚ್ಚರಿಕೆ ಕ್ರಮವಾಗಿ, ಹತ್ತಿರದ ಮನೆಗಳನ್ನು ಸ್ಥಳಾಂತರಿಸಲಾಗಿದೆ.

ಶಿಮ್ಲಾದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಉಪ ಆಯುಕ್ತ ಅನುಪಮ್ ಕಶ್ಯಪ್ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ ವಿರುದ್ಧ ನಾಳೆ ಬಿಜೆಪಿ ಪ್ರತಿಭಟನೆ