Publish Date: Thu, 19 Jun 2025 (08:52 IST)
Updated Date: Thu, 19 Jun 2025 (08:55 IST)
ಬೆಂಗಳೂರು: ನಟ ದರ್ಶನ್ ನಿನ್ನೆ ಕೇರಳದ ಕೊಟ್ಟಿಯೂರು ಶಿವ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ. ಅಷ್ಟಕ್ಕೂ ಈ ಕೊಟ್ಟಿಯೂರು ಶಿವ ದೇವಾಲಯ ಇರುವುದು ಎಲ್ಲಿ, ಇದರ ವಿಶೇಷತೆ ಏನು ಇಲ್ಲಿದೆ ವಿವರ.
ಕೇರಳದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಶಿವ ಕ್ಷೇತ್ರಕ್ಕೆ ಅದರದ್ದೇ ಆದ ವಿಶೇಷತೆಯಿದೆ. ಇದು ವಡಕ್ಕೇಶ್ವರಂ ದೇವಾಲಯ ಎಂದೂ ಪ್ರಸಿದ್ಧವಾಗಿದೆ. ಇದು ವಾವಲಿ ನದಿಯ ತಟದಲ್ಲಿರುವ ದೇವಾಲಯವಾಗಿದೆ. ಹೀಗಾಗಿ ಕೇರಳೀಯರು ಇದನ್ನು ಇಕ್ಕರೆ ದೇವಾಲಯ ಎಂದೂ ಕರೆಯುತ್ತಾರೆ.
ಇಲ್ಲಿ ಎರಡು ಶಿವ ದೇವಾಲಯವಿದೆ. ಒಂದು ವಾವಲಿ ನದಿಯ ಪೂರ್ವ ದಂಡೆಯಲ್ಲಿ ಇನ್ನೊಂದು ಪಶ್ಚಿಮ ದಂಡೆಯಲ್ಲಿ. ದಟ್ಟ ಅರಣ್ಯದ ನಡುವೆ ಇರುವ ಈ ದೇವಾಲಯ ಈ ಹಿಂದೆ ದಕ್ಷ ಯಾಗದ ಸ್ಥಳವಾಗಿತ್ತು ಎಂಬುದು ಪ್ರತೀತಿ. ಇಲ್ಲಿಯೇ ಸತಿ ದೇವಿಯು ದಕ್ಷನಿಂದ ತನ್ನ ಪತಿ ಪರಮೇಶ್ವರನಿಗೆ ಅವಮಾನವಾಗಿದ್ದಕ್ಕೆ ಸಹಿಸದೇ ಅಗ್ನಿಗೆ ಆಹುತಿಯಾದಳು ಎಂಬ ನಂಬಿಕೆಯಿದೆ.
ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿ ಈಗಲೂ ಈ ದೇವಾಲಯವಿರುವುದು ವಿಶೇಷ. ಸತಿ ದೇವಿಗೆ ಕೆಲವೇ ಕೆಲವು ದೇವಾಲಯಗಳಿವೆ. ಅದರಲ್ಲಿ ಇದೂ ಒಂದು ಎಂಬುದು ವಿಶೇಷ. ಇಲ್ಲಿ ಪ್ರತೀ ವರ್ಷ ಮೇ-ಜೂನ್ ತಿಂಗಳಲ್ಲಿ ನಡೆಯುವ ವೈಶಾಖ ಮಹೋತ್ಸವವು ವಿಶೇಷವಾಗಿದೆ. ಈ ದಿನಗಳಂದು ಶಿವನಿಗೆ ಎಳೆನೀರು ಸಮರ್ಪಣೆ ಮಾಡುವುದು ವಿಶೇಷವಾಗಿದೆ. ಈಗ ಕೊಟ್ಟಿಯೂರಿನಲ್ಲಿ ವೈಶಾಖ ಮಹೋತ್ಸವ ನಡೆಯುತ್ತಿದೆ. ಇದೇ ಕಾರಣಕ್ಕೆ ಸಾಕಷ್ಟು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಪುರುಷರು ಸಾಂಪ್ರದಾಯಿಕ ಧೋತಿ ಧರಿಸಬೇಕು. ಸ್ತ್ರೀಯರು ಚೂಡಿದಾರ್ ಅಥವಾ ಸೀರೆ ತೊಟ್ಟು ಪ್ರವೇಶ ಮಾಡಬೇಕು.