ಬೆಂಗಳೂರು: ಕಬಡ್ಡಿ ಅಭಿಮಾನಿಗಳಿಗೆ ಇಂದಿನಿಂದ ಎರಡು ತಿಂಗಳು ಭರ್ಜರಿ ಮನರಂಜನೆ ಸಿಗಲಿದೆ. ಪ್ರೊ ಕಬಡ್ಡಿ ಟೂರ್ನಿಯ 12ನೇ ಆವೃತ್ತಿಗೆ ಇಂದು ಚಾಲನೆ ದೊರೆಯಲಿದೆ. ಕನ್ನಡಿಗ ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ಬೆಂಗಳೂರು ಬುಲ್ಸ್ ತಂಡವು ಹೊಸ ಹುರುಪಿನೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ.
ವಿಶಾಖಪಟ್ಟಣದ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಟೂರ್ನಿಗೆ ಚಾಲನೆ ದೊರೆಯಲಿದೆ. ಉದ್ಘಾಟನೆ ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿಯಾಗಲಿವೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪುಣೇರಿ ಪಲ್ಟನ್ ಕಾದಾಟ ನಡೆಸಲಿವೆ.
ಟೂರ್ನಿಯಲ್ಲಿ 12 ತಂಡಗಳು ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿವೆ. ಬೆಂಗಳೂರು ಬುಲ್ಸ್ ತಂಡವನ್ನು ಅಂಕುಶ್ ರಾಠಿ ಮುನ್ನಡೆಸಲಿದ್ದಾರೆ. ಅವರು ಹೋದ ಋತುವಿನಲ್ಲಿ ಜೈಪುರ ತಂಡದಲ್ಲಿದ್ದರು. ಅವರ ಮೇಲೆ ನಿರೀಕ್ಷೆಗಳ ಭಾರವಿದೆ.
ಬೆಂಗಳೂರು ಬುಲ್ಸ್ ಮುಖ್ಯ ಕೋಚ್ ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ಯುವ ತಂಡವು ಸಿದ್ಧವಾಗಿದೆ. ಇರಾನ್ ಆಟಗಾರರಾದ ಅಹಮದ್ ರೇಝಾ ಅಸ್ಗರಿ ಮತ್ತು ಅಲಿರೇಝಾ ಮಿರ್ಜಾನ್ ಅವರೂ ತಮ್ಮ ಸಾಮರ್ಥ್ಯ ತೋರಲು ಸಿದ್ಧರಾಗಿದ್ದಾರೆ. ಉತ್ತಮ ಆಟಗಾರರಾದ ಪಂಕಜ್ ಮೋಹಿತೆ, ಗೌರವ್ ಖತ್ರಿ ಹಾಗೂ ಮೋಹಿತ್ ಗೋಯತ್ ಅವರಿರುವ ಪುಣೇರಿ ತಂಡವೂ ಸವಾಲೊಡ್ಡಲು ಸಿದ್ಧವಾಗಿದೆ.
ವಿಶಾಖಪಟ್ಟಣ (ಅ.29 ರಿಂದ ಸೆ.11) ನಂತರ ಜೈಪುರ (ಸೆ 12 ರಿಂದ 28), ಚೆನ್ನೈ (ಸೆ 29 ರಿಂದ ಅ.10) ಮತ್ತು ನವದೆಹಲಿ (ಅ.11 ರಿಂದ ಅ.23) ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಆಯೋಜನೆಯ ಸ್ಥಳಗಳನ್ನು ಲೀಗ್ ನಂತರ ನಿರ್ಧರಿಸಲಾಗುವುದು.