ಬೆಂಗಳೂರು: ಚಳಿಗಾಲದಲ್ಲಿ ತುಂಬಾ ಶೈತ್ಯ ಹವೆಯಿರುತ್ತದೆ. ಈ ಸಮಯದಲ್ಲಿ ಬೇಸಿಗೆಯಷ್ಟು ಖಾರವಾದ ಬಿಸಿಲು, ಬೆವರು ಬರಲ್ಲ. ಹೀಗಾಗಿ ಈ ಸಮಯದಲ್ಲಿ ಸನ್ ಸ್ಕ್ರೀನ್ ಲೋಷನ್ ಬಳಸಬೇಕಾ ಬೇಡವಾ ಎಂಬುದಕ್ಕೆ ಇಲ್ಲಿದೆ ಉತ್ತರ.
ಚಳಿಗಾಲದಲ್ಲಿ ಬೇಸಿಗೆಯಷ್ಟು ಬಿರು ಬಿಸಿಲು ಇಲ್ಲದೇ ಇರುವ ಕಾರಣ ಸನ್ ಸ್ಕ್ರೀನ್ ಬೇಡ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಇನ್ನೊಂದು ಕಡೆ ಚಳಿಯಾಗುವಾಗ ಬಿಸಿಲಿಗೆ ಮೈ ಒಡ್ಡಲು ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಚಳಿಗಾಲದಲ್ಲೂ ಸೂರ್ಯನ ವಿಕಿರಣಗಳು ಚರ್ಮದ ಮೇಲೆ ಹಾನಿ ಉಂಟು ಮಾಡಬಹುದು.
ಮೋಡ ಕವಿದ ವಾತಾವರಣವಿದ್ದರೂ ಸೂರ್ಯನ ಕಿರಣಗಳು ನಮ್ಮ ಚರ್ಮದ ಮೇಲೆ ಬಿದ್ದೇ ಬೀಳುತ್ತದೆ. ಇದರಿಂದಾಗಿ ಚರ್ಮ ಹಾಳಾಗುವ ಸಾಧ್ಯತೆಯಿದೆ. ಅದರಲ್ಲೂ ಎತ್ತರದ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಸೂರ್ಯನ ತಾಪ ಮೈಮೇಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಚರ್ಮ ಸಂರಕ್ಷಣೆ ಮುಖ್ಯವಾಗುತ್ತದೆ.
ಅದರಲ್ಲೂ ಹೊರಾಂಗಣದಲ್ಲಿ ಹೆಚ್ಚು ಕೆಲಸ ಮಾಡುವ ಸಂದರ್ಭ ಬಂದರೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದು ತುಂಬಾ ಮುಖ್ಯ. ಜೊತೆಗೆ ಚಳಿಗಾಲದಲ್ಲಿ ಶುಷ್ಕ ವಾತಾವರಣವಿರುವುದರಿಂದ ಚರ್ಮ ಡ್ರೈ ಆಗುವುದನ್ನು ತಪ್ಪಿಸಲು ಮಾಯಿಶ್ಚರೈಸರ್ ಹಚ್ಚುವುದು ತುಂಬಾ ಮುಖ್ಯವಾಗುತ್ತದೆ.