ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದ್ದು, ಮೋದಿಗೂ, ಕೇಜ್ರಿಗೂ ಲಬ್ ಡಬ್ ಶುರುವಾಗಿದೆ.
ದೆಹಲಿ ವಿಧಾನಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಪ್ರಚಾರ ಶುರು ಮಾಡಿಕೊಂಡಿದ್ದಾರೆ. ಆದರೆ ಇದುವರೆಗೆ ಚುನಾವಣಾ ದಿನಾಂಕ ಪ್ರಕಟವಾಗಿರಲಿಲ್ಲ. ಇಂದು ಅಪರಾಹ್ನ 2 ಗಂಟೆಗೆ ದಿನಾಂಕ ಪ್ರಕಟಿಸುವುದಾಗಿ ಚುನಾವಣಾ ಆಯೋಗ ಪ್ರಕಟಣೆ ನೀಡಿದೆ. ಪತ್ರಿಕಾಗೋಷ್ಠಿ ನಡೆಸಿ ರಾಷ್ಟ್ರ ರಾಜಧಾನಿ ಚುನಾವಣೆ ದಿನಾಂಕ ಪ್ರಕಟಿಸಲಿದೆ.
ಫೆಬ್ರವರಿ 23 ಕ್ಕೆ ಹಾಲಿ ವಿಧಾನಸಭೆಯ ಅವಧಿ ಮುಕ್ತಾಯವಾಗುತ್ತದೆ. 70 ಸದಸ್ಯ ಬಲವುಳ್ಳ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಮತ್ತು ಹಾಲಿ ಸಿಎಂ ಅತಿಶಿ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಈ ಚುನಾವಣೆ ಕೇಜ್ರಿವಾಲ್ ಮತ್ತು ಮೋದಿಗೆ ಪ್ರತಿಷ್ಠೆಯ ಕಣವಾಗಿದೆ. ದೆಹಲಿಯಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಾ ಬಂದರೂ ವಿಧಾನಸಭೆ ಚುನಾವಣೆಯಲ್ಲಿ ಎಡವುತ್ತಾ ಬಂದಿದೆ. ತಮ್ಮ ವಿರುದ್ಧ ಇಡಿ ಛೂ ಬಿಟ್ಟು ಮೋದಿ ಜೈಲಿಗೆ ಕಳುಹಿಸಿದ್ದರು ಎಂದು ಕೇಜ್ರಿವಾಲ್ ಬುಸುಗುಟ್ಟುತ್ತಿದ್ದಾರೆ. ಹೀಗಾಗಿ ಅವರು ಬಿಜೆಪಿ ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಮೋದಿಗೂ ರಾಷ್ಟ್ರ ರಾಜಧಾನಿಯನ್ನು ಗೆಲ್ಲುವ ಕನಸು ನನಸು ಮಾಡಿಕೊಳ್ಳುವ ಹಠವಿದೆ. ಹೀಗಾಗಿ ಇಬ್ಬರಿಗೂ ಚುನಾವಣೆ ವಿಶೇಷವಾಗಿದೆ.