ನವದೆಹಲಿ: ಆಮ್ ಆದ್ಮಿ ಪಕ್ಷವು ದೆಹಲಿಗೆ ಅನಾಹುತವಿದ್ದಂತೆ. ದೆಹಲಿಯಲ್ಲಿ ಈ ಅನಾಹುತದ ವಿರುದ್ಧ ಕದನ ಆರಂಭವಾಗಿದೆ. ಈ ಪಕ್ಷವನ್ನು ಕಿತ್ತೊಗೆಯುವುದೊಂದೇ ನಮ್ಮ ಧ್ಯೇಯ. ಈ ಅನಾಹುತವನ್ನು ಕಿತ್ತೊಗೆದು, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಈ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ. ಎಎಪಿ ಆಡಳಿತವು ಇನ್ನೂ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದಿದ್ದಾರೆ.
ಒಂದೆಡೆ ಎಲ್ಲವನ್ನೂ ಉತ್ತಮಗೊಳಿಸಲು ಕೇಂದ್ರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ಮತ್ತೊಂದೆಡೆ ಕೇಂದ್ರಾಡಳಿತ ಪ್ರದೇಶವು, ಲಜ್ಜೆಗೆಟ್ಟು ಸುಳ್ಳುಗಳನ್ನು ಹರಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಎಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶಾಲಾ ಶಿಕ್ಷಣ, ಮಾಲಿನ್ಯ ಹಾಗೂ ಮದ್ಯ ಮಾರಾಟ ಕುರಿತು ಸಾಕಷ್ಟು ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಬಡವರಿಗೆ ನಿರ್ಮಾಣಗೊಂಡ ಮನೆಗಳು ಹಾಗೂ ಹೆದ್ದಾರಿಗಳ ನಿರ್ಮಾಣದಲ್ಲಿ ಅನಾಹುತ ಸರ್ಕಾರದ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇವು ಕಾರ್ಯರೂಪಕ್ಕೆ ಬಂದಿವೆ. ದೇಶದ ಜನರಿಗೆ ಮನೆ ಕಟ್ಟಿಕೊಡುವುದು ತನ್ನ ಕನಸು ಎಂದಿದ್ದ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಅವರು ತಮಗಾಗಿ ಶೀಶ ಮಹಲ್ ನಿರ್ಮಿಸಿಕೊಳ್ಳಬಹುದಿತ್ತು. ಈ ಪಕ್ಷದ ಜನರು ಭ್ರಷ್ಟಾಚಾರ ನಡೆಸುತ್ತಾರೆ. ನಂತರ ಅದನ್ನು ವೈಭವೀಕರಿಸುತ್ತಾರೆ ಎಂದು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.