ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಘೋಷಿಸಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪತ್ರಿಕೋಗೋಷ್ಠಿ ನಡೆಸಿ ಜನರಿಗೆ ನೀಡಲಿರುವ ಗ್ಯಾರಂಟಿ ಯೋಜನೆಯನ್ನು ಅನಾವರಣಗೊಳಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಅವರು, ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ಯಾರಿ ದೀದಿ ಯೋಜನೆ ಜಾರಿ ಮಾಡಲಿದ್ದೇವೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೀಡುತ್ತೇವೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮಾಡಿದ ಹಾಗೆಯೇ ಮೊದಲ ಸಚಿವ ಸಂಪುಟದ ಸಭೆಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.
ದೆಹಲಿ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ದೆಹಲಿಯ ಜನರಿಗೆ 5 ದೊಡ್ಡ ಭರವಸೆಗಳನ್ನು ವಿಧಾನಸಭೆ ಚುನಾವಣೆಗೆ ನೀಡಲು ಹೊರಟಿದೆ. ಅದರ ಮೊದಲ ಗ್ಯಾರಂಟಿ ಪ್ಯಾರಿ ಯೋಜನೆಯಾಗಿದೆ.
ದೆಹಲಿಯ ಮಹಿಳೆಯರ ಖಾತೆಗಳಿಗೆ ನೇರವಾಗಿ ಹಣವನ್ನು ಕಳುಹಿಸುವ ಯೋಜನೆಯನ್ನು ತರಲು ಕಾಂಗ್ರೆಸ್ ಭರವಸೆ ನೀಡುತ್ತದೆ. ಎಎಪಿ ಈಗಾಗಲೇ ದೆಹಲಿಯ ಮಹಿಳೆಯರಿಗೆ 2100 ರೂ ಘೋಷಿಸಿರುವುದರಿಂದ, ಕಾಂಗ್ರೆಸ್ ಮಹಿಳೆಯರಿಗೆ 2500 ರೂ ಭರವಸೆ ನೀಡುವ ಮೂಲಕ ಒಂದು ಹೆಜ್ಜೆ ಮುಂದಿಡುತ್ತಿದೆ.