ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ, ಹಿರಿಯ ಸಾಹಿತಿ ಡಾ ನಾ ಡಿಸೋಜ ಇನ್ನಿಲ್ಲ. ನಿನ್ನೆ ಸಂಜೆ ಅವರು ಇಹಲೋಕ ತ್ಯಜಿಸಿದ್ದಾರೆ.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದಾಗಿ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅವರ ಮೃತದೇಹವನ್ನು ಸಾಗರದ ಸ್ವಗೃಹಕ್ಕೆ ಕರೆದುಕೊಂಡು ಹೋಗಿ ಇಂದು ಸಾರ್ವನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 1937 ಜೂನ್ 6 ರಂದು ಜನಿಸಿದ್ದ ನಾ ಡಿಸೋಜ ಇದುವರೆಗೆ ಸಾಕಷ್ಟು ಕಾದಂಬರಿಗಳು, ನಾಟಕಗಳು, ಮಕ್ಕಳ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದೆ.
2011 ರಲ್ಲಿ ಅವರ ಕಿರು ಕಾದಂಬರಿ ಮುಳುಗಡೆಯ ಊರಿಗೆ ಬಂದವರು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಮಡಿಕೇರಿಯಲ್ಲಿ 2014 ರಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಗ್ಗಳಿಕೆಯೂ ಅವರದ್ದಾಗಿದೆ. ಇದೀಗ ತಮ್ಮ 87 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಹಿರಿಯ ಸಾಹಿತಿಯ ಅಗಲುವಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಬಿವೈ ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.