ಬೆಂಗಳೂರು: ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಕಾಂಗ್ರೆಸ್‌ನ ಗ್ಯಾಂಗ್ ಅನ್ನು ಸಂಪರ್ಕಿಸಿ ಎಂದು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದೆ.
ಅಧಿಕಾರಿಗಳು ಮತ್ತು ರೈತರ ಆತ್ಮಹತ್ಯೆ, ಬಾಣಂತಿಯರ ಸಾವು, ಪೊಲೀಸರ ಮೇಲೆ ಹಲ್ಲೆ, ಅವಾಚ್ಯ ಶಬ್ದಗಳ ಬಳಕೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ರಾಜ್ಯ ಸರ್ಕಾರವನ್ನು ಬೊಟ್ಟು ಮಾಡಿರುವ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, ರಾಜ್ಯದಲ್ಲಿ ಕೊಲೆ, ಬೆದರಿಕೆ, ಆತ್ಮಹತ್ಯೆಗೆ ಸುಪಾರಿ ನೀಡಲು ಕಾಂಗ್ರೆಸ್‌ನ ಗ್ಯಾಂಗ್ ಅನ್ನು ಸಂಪರ್ಕಿಸಿ ಎಂದು ಒಬ್ಬೊಬ್ಬರ ಹೆಸರನ್ನು ಬರೆದುಕೊಂಡಿದೆ.
ಧಮ್ಕಿಗೆ ಡಿಕೆ ಶಿವಕುಮಾರ್, ಕೊಲೆಗೆ ವಿನಯ್ ಕುಲಕರ್ಣಿ, ಆತ್ಮಹತ್ಯೆಗೆ ಸುಪಾರಿಗೆ ಪ್ರಿಯಾಂಕ್ ಖರ್ಗೆ, ಶಾಸಕರ ಕೊಲೆಗೆ ಲಕ್ಷ್ಮಿ ಹೆಬ್ಬಾಳ್ಕರ್, ರೈತರು ಮತ್ತು ಅಧಿಕಾರಿಗಳ ಹತ್ಯೆಗೆ ಸಿದ್ದರಾಮಯ್ಯ, ಆಸ್ಪತ್ರೆಗಳಲ್ಲಿ ಕೊಲೆಗೆ ದಿನೇಶ್ ಗುಂಡೂರಾವ್, ದಲಿತರ ಮೇಲಿನ ಹಲ್ಲೆಗೆ ಹಿರಿಯೂರು ಡಿ. ಸುಧಾಕರ್, ಪೊಲೀಸರ ಮೇಲೆ ಹಲ್ಲೆಗೆ ವಿಜಯಾನಂದ ಕಾಶಪ್ಪನವರ್, ಅವಾಚ್ಯ ಶಬ್ದ ಬಳಸಿ ಬೈಯಲು ಅರಸೀಕೆರೆ ಶಿವಲಿಂಗೇಗೌಡ ಅವರನ್ನು ಸಂಪರ್ಕಿಸಿ. ಅವಶ್ಯಕತೆ ಇರುವವರು ಸಂಪರ್ಕಿಸಬೇಕಾದ ವಿಳಾಸ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿ ಎಂದು ಬರೆದುಕೊಂಡಿದೆ.