ಶಿವಮೊಗ್ಗ: ರಾಜ್ಯದಲ್ಲಿ ನಡೆದ ಸರಣಿ ಬಾಣಂತಿಯರ ಹಾಗೂ ನವಜಾತ ಶಿಶುಗಳ ಸಾವು ಸಂಬಂಧ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಚ್ಚರಿಸಿದ್ದಾರೆ.
ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ 6 ತಿಂಗಳಿನಲ್ಲಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 600ಕ್ಕೂಅಧಿಕ ಬಾಣಂತಿಯರು ಮತ್ತು 1 ಸಾವಿರಕ್ಕೂ ಅಧಿಕ ನವಜಾತ ಶಿಶು ಮರಣ ಹೊಂದಿದ್ದಾರೆ. ಸರ್ಕಾರ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ ಕಲ್ಪಿಸಿದೆ. ಇದು ದುಷ್ಟ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಬಾಣಂತಿಯರ ಮತ್ತು ಕಂದಮ್ಮಗಳ ಸಾವಿನ ಶಾಪ ತಟ್ಟುತ್ತದೆ. ಇದರಿಂದ ಸಿಎಂ ಸಿದ್ದರಾಮಯ್ಯಗೆ ಒಳ್ಳೆಯದಾಗಲ್ಲ. ಇಷ್ಟೊಂದು ಸಾವು ನೋವು ರಾಜ್ಯದಲ್ಲಿ ಎಂದೂ ಸಂಭವಿಸಿಲ್ಲ. ಇಂತಹ ಲಜ್ಜೆಗೆಟ್ಟ ಮತ್ತು ನಾಚಿಕೆಗೆಟ್ಟ ಸರ್ಕಾರವನ್ನು ನೋಡಿಲ್ಲ. ಬೇಜವಾಬ್ದಾರಿತನ ತೋರುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಚಿವ ಸಂಪುಟದಿಂದ ಸಿಎಂ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.