Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ಸಿನಲ್ಲಿ ಯುದ್ಧ ಶುರುವಾಗಿದೆ, ಮುಂದೆ ನೋಡ್ತಾ ಇರಿ: ವಿಜಯೇಂದ್ರ

BY Vijayendra

Krishnaveni K

ಶಿವಮೊಗ್ಗ , ಶನಿವಾರ, 4 ಜನವರಿ 2025 (16:34 IST)
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾಂಗ್ರೆಸ್ಸಿನಲ್ಲಿ ಈಗಾಗಲೇ ಯುದ್ಧ ಆರಂಭವಾಗಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ವಾಮಿ ಸಿದ್ದರಾಮಯ್ಯನವರೇ ನಾನು ಭವಿಷ್ಯ ನುಡಿಯುತ್ತೇನೋ, ನನ್ನ ರಾಜಕೀಯ ಲೆಕ್ಕಾಚಾರವೇ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಒಂದಂತೂ ಸತ್ಯ. ರಾಜ್ಯ ಸರಕಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಸಿದ್ದರಾಮಯ್ಯ ಪ್ರಾಯೋಜಿತ ಔತಣಕೂಟವೇ ಸಾಕ್ಷಿ ಎಂದರು. ಸಿದ್ದರಾಮಯ್ಯನವರು ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧರಿಲ್ಲ; ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಲು ಅವರ ವಿರೋಧಿ ಬಣಗಳೂ ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವಿಶ್ಲೇಷಿಸಿದರು.

ಬಜೆಟ್ ಬಳಿಕ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಮತ್ತು ಆ ಸಂಬಂಧ ಕೇಂದ್ರದಲ್ಲಿ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಹೊರಬರುತ್ತಿದೆ. ಬಜೆಟ್ ನಂತರದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕಾಗುವ ಕಾರಣಕ್ಕೆ ಒಂದು ರಾಜಕೀಯ ದಾಳವನ್ನು ಉರುಳಿಸಲು ನಿನ್ನೆ ಮುನ್ನುಡಿ ಬರೆದಿದ್ದಾರೆ ಎಂದು ವಿವರಿಸಿದರು.

ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಸಂಬಂಧ ಗುಲ್ಬರ್ಗದಲ್ಲಿ ಪ್ರಿಯಾಂಕ ಖರ್ಗೆ ಅವರ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ. ಪ್ರಿಯಾಂಕ್ ಆಪ್ತ ಮಿತ್ರ, ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಬೆದರಿಕೆಯಿಂದ ಆತ್ಮಹತ್ಯೆ ನಡೆದಿದೆ. ಮೃತರ ಕುಟುಂಬದ ಕೋರಿಕೆಯಂತೆ ಸಂಪೂರ್ಣ ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ ಅವರು, ಹಿಂದೂ- ಬಿಜೆಪಿ ಮುಖಂಡರ ಹತ್ಯೆಗೆ ಮಹಾರಾಷ್ಟ್ರದಿಂದ ಸುಪಾರಿ ಕಿಲ್ಲರ್‍ಗಳಿಗೆ ಕುಮ್ಮಕ್ಕು ಕೊಟ್ಟಿದ್ದನ್ನೂ ವಿವರಿಸಿದರು. ಶಾಸಕ ಮಿತ್ರ ಪ್ರಿಯಾಂಕ್ ಖರ್ಗೆಯವರು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ಕೊಡಿಸಲಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಗಳನ್ನು ನಂಬಲು ಹೋಗದಿರಿ; ನಿಮಗೆ ನ್ಯಾಯ ಸಿಗುವ ಭರವಸೆ ನನಗಂತೂ ಇಲ್ಲ. ನಿಮ್ಮ ಪಕ್ಷದಲ್ಲೇ ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆ ಪರವಾಗಿ ಯಾರೂ ಮಾತನಾಡುತ್ತಿಲ್ಲ; ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಿದ ಮಾದರಿಯಲ್ಲಿ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಿ ಎಂದು ಕಿವಿಮಾತು ಹೇಳಿದರು.

ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಗೆ ಆಗ್ರಹ
ರಾಜ್ಯದಲ್ಲಿ 736ಕ್ಕೂ ಹೆಚ್ಚು ಬಾಣಂತಿಯರ ಸಾವು, ಸಾವಿರಕ್ಕೂ ಹೆಚ್ಚು ನವಜಾತ ಶಿಶುಗಳ ಸಾವು ಸಂಭವಿಸಿದೆ. ಈ ಸರಣಿ ಸಾವು ಈಗಲೂ ಮುಂದುವರೆದಿದೆ ಎಂದ ಅವರು, ಕಳಪೆ ಔಷಧಿ, ರಾಜ್ಯ ಸರಕಾರದ ವೈಫಲ್ಯ ಇದಕ್ಕೆ ಕಾರಣ ಎಂದು ಆರೋಪಿಸಿದರು. ಮೃತರ ಕುಟುಂಬಕ್ಕೆ ಪರಿಹಾರವನ್ನೂ ನೀಡಿಲ್ಲ ಎಂದು ಟೀಕಿಸಿದರು. ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಸಂಬಂಧ ರಾಜೀನಾಮೆ ಕೊಡಬೇಕೆಂದು ವಿಜಯೇಂದ್ರ ಅವರು ಆಗ್ರಹಿಸಿದರು.

ಕೇಂದ್ರದ ನರೇಂದ್ರ ಮೋದಿಜೀ ನೇತೃತ್ವದ ಸರಕಾರವು ಬಾಣಂತಿಯರು, ಹಸುಗೂಸುಗಳಿಗೆ ಸಂಬಂಧಿಸಿ ಮಾತೃವಂದನಾ, ಇಂದ್ರಧನುಷ್ ಸೇರಿ ಅನೇಕ ಯೋಜನೆಗಳನ್ನು ನೀಡಿದೆ. ಅಂಥ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಅವಕ್ಕೂ ಕತ್ತರಿ ಹಾಕಲಾಗುತ್ತಿದೆ ಎಂದು ಆಕ್ಷೇಪಿಸಿದರು. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಬೇಕು; ನವಜಾತ ಶಿಶುಗಳ ಸಾವಿಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಅವರು ಬೆಂಗಳೂರಿಗೆ ಬಂದಿದ್ದು, ಅವರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಮುಖಂಡ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡರಾದ ಬಳಿಗಾರ್ ಅವರು ನಿಧನರಾಗಿದ್ದು, ಅನಿವಾರ್ಯವಾಗಿ ಶಿಕಾರಿಪುರಕ್ಕೆ ಬರಬೇಕಿತ್ತು. ಆದ್ದರಿಂದ ಇವತ್ತು ಗುಲ್ಬರ್ಗಕ್ಕೆ ತೆರಳಲಾಗಿಲ್ಲ ಎಂದರು.

ಮುಡಾದ ಹಗರಣ, 62 ಕೋಟಿ ಕೊಟ್ಟರೆ ಮಾತ್ರ 14 ನಿವೇಶನಗಳನ್ನು ವಾಪಸ್ ಮಾಡುವುದಾಗಿ ಹೇಳಿ ನಿವೇಶನಗಳನ್ನು ಹಣ ಪಡೆಯದೆ ವಾಪಸ್ ಮಾಡಲು ಬಿಜೆಪಿ ತೀವ್ರ ಹೋರಾಟ ಕಾರಣ ಆದುದನ್ನೂ ಅವರು ಪ್ರಸ್ತಾಪಿಸಿದರು.

ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ

ಬಸ್ ಪ್ರಯಾಣದರವನ್ನು ರಾಜ್ಯ ಸರಕಾರವು ಶೇ 15ರಷ್ಟು ಹೆಚ್ಚಿಸಿದೆ. ಶಕ್ತಿ ಯೋಜನೆಗೆ ಹಣ ಹೊಂದಿಸಲು ಸಾಧ್ಯವಾಗದುದೇ ಇದಕ್ಕೆ ಕಾರಣ. ಸಾರಿಗೆ ಸಂಸ್ಥೆಗಳು ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿವೆ. ಸಾರಿಗೆ ಸಂಸ್ಥೆ ಮುಚ್ಚಿಹಾಕುವ ದುಸ್ಥಿತಿ ಬಂದಿದೆ. ಮಹಿಳೆಯರಿಗೆ ಉಚಿತ- ಪುರುಷರಿಗೆ ಅದರ ಹೊರೆ ಖಚಿತ ಎಂಬಂತೆ ಸರಕಾರವು ಬರೆ ಹಾಕುತ್ತಿದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಇದ್ದು ಹಣಕಾಸಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಸಿದ್ದರಾಮಯ್ಯರಿಗೆ ಇಲ್ಲಿ ಹಣಕಾಸು ಇಲಾಖೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಬಡವರು, ರೈತರ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ರಾಜ್ಯದ ಹಣಕಾಸಿನ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯವನ್ನು ಮುಂದಿಟ್ಟರು.

ಬಸ್, ವಿದ್ಯುತ್ ದರ ಏರಿಕೆ ಎಲ್ಲ ಸರಕಾರದಲ್ಲೂ ನಡೆದುಕೊಂಡು ಬಂದಿದೆ. ಯಾವ್ಯಾವ ಸರಕಾರದಲ್ಲಿ ಯಾವ್ಯಾವ ಕಾರಣಕ್ಕೆ ಏರಿಸಿದ್ದಾರೆ ಎಂಬುದನ್ನು ರಾಮಲಿಂಗಾರೆಡ್ಡಿಯವರು ಗಮನಿಸಬೇಕು. ನಿಮ್ಮ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ಪ್ರಯಾಣದರ ಏರಿಸಿದೆ. ಇಲ್ಲವಾದರೆ ಸಾರಿಗೆ ಸಂಸ್ಥೆ ಮುಚ್ಚುವ ಪರಿಸ್ಥಿತಿ ಬರಲಿದೆ. ಹಾಗಾಗಿ ರಾಮಲಿಂಗಾರೆಡ್ಡಿಯವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಪ್ರಿಯಾಂಕ್ ಖರ್ಗೆಯವರ ಕುರಿತು ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ
ಗುತ್ತಿಗೆದಾರನ ಆತ್ಮಹತ್ಯೆ, ಸುಪಾರಿ ಕಿಲ್ಲರ್‍ಗಳನ್ನು ಬಾಡಿಗೆಗೆ ಪಡೆದಿರುವುದು ಗಂಭೀರ ಪ್ರಕರಣ. ಪ್ರಿಯಾಂಕ್ ಖರ್ಗೆಯವರ ಕುರಿತು ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ. ಅವರು ಗುತ್ತಿಗೆದಾರನ ಆತ್ಮಹತ್ಯೆ ಸಂಬಂಧ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ್ದರು ಎಂದರಲ್ಲದೆ, ಪ್ರಿಯಾಂಕ್ ಅವರೇ, ನಾನು ಮೊದಲ ಬಾರಿ ಶಾಸಕನಾಗಿ ಗೆದ್ದಿರಬಹುದು; ಆದರೆ, ನಾನು ಶಾಸಕನಾಗುವ ಮೊದಲು ಕೆ.ಆರ್.ಪೇಟೆ, ಶಿರಾದಲ್ಲಿ ಚುನಾವಣೆ ಎದುರಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದನ್ನೂ ತಿಳಿದುಕೊಳ್ಳಿ ಎಂದು ಪ್ರಶ್ನೆಗೆ ಉತ್ತರ ನೀಡಿ ಸವಾಲೆಸೆದರು.

ವರುಣಾದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದರೆ, ನಿಮ್ಮ ಸಿದ್ದರಾಮಯ್ಯನವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯನವರ ಬಳಿ ಕೇಳಿ ತಿಳಿದುಕೊಳ್ಳಿ ಎಂದು ತಿಳಿಸಿದರು. ನನ್ನ ಬಗ್ಗೆ ಉದ್ಧಟತನದಿಂದ ಮಾತನಾಡುವ ಬದಲಾಗಿ ಸಚಿವರಾದ ನೀವು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಎಚ್ಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಿಯಂತ್ರಣ ತಪ್ಪಿದ ಸೇನಾ ಟ್ರಕ್‌: ನಾಲ್ವರು ಯೋಧರು ಸಾವು, ಮೂವರು ಗಂಭೀರ