ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಬದಲಾವಣೆ ಸುದ್ದಿ ಬೆನ್ನಲ್ಲೇ ಬಿವೈ ವಿಜಯೇಂದ್ರ ದೆಹಲಿಯಲ್ಲಿ ಗೃಹಸಚಿವ ಅಮಿತ್ ಶಾ ಮುಂದೆ ಲಾಬಿ ಮಾಡಿಕೊಂಡು ಬಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವಧಿ ಸದ್ಯದಲ್ಲೇ ಮುಕ್ತಾಯವಾಗಲಿದೆ. ಇದಾದ ಬಳಿಕ ರಾಜ್ಯಾಧ್ಯಕ್ಷರನ್ನಾಗಿ ಬೇರೆಯವರನ್ನು ಆಯ್ಕೆ ಮಾಡಲು ಬಸನಗೌಡ ಪಾಟೀಲ್ ಯತ್ನಾಳ್ ಬಣ ಪಟ್ಟು ಹಿಡಿದಿದೆ. ಹೀಗಾಗಿ ವಿಜಯೇಂದ್ರ ದೆಹಲಿಗೇ ತೆರಳಿ ಅಮಿತ್ ಶಾ ಮುಂದೆ ಮಾತುಕತೆ ನಡೆಸಿದ್ದಾರೆ.
ಅಮಿತ್ ಶಾ ಭೇಟಿ ವೇಳೆ ಬಸನಗೌಟ ಪಾಟೀಲ್ ಯತ್ನಾಳ್ ಬಣದ ವಿರುದ್ಧ ವಿಜಯೇಂದ್ರ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ ಎನ್ನಲಾಗಿದೆ. ಯತ್ನಾಳ್ ಬಣದ ಪ್ರತ್ಯೇಕ ಸಭೆ, ಬಹಿರಂಗ ಹೇಳಿಕೆಗಳ ಬಗ್ಗೆ ಅಮಿತ್ ಶಾಗೆ ದೂರು ನೀಡಿದ್ದಾರೆ. ಈ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ವಿಜಯೇಂದ್ರ ಅಡಿಪಾಯ ಹಾಕಿ ಬಂದಿದ್ದಾರೆ.
ಇನ್ನೊಂದೆಡೆ ರಾಜ್ಯದಲ್ಲಿ ಇತ್ತೀಚೆಗೆ ನಡೆಸಿದ ಸದಸ್ಯತ್ವ ಅಭಿಯಾನ, ರಾಜ್ಯ ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೀಗ ಮುಂದಿನ ಅಧ್ಯಕ್ಷರಾಗಿ ವಿಜಯೇಂದ್ರರನ್ನೇ ಮುಂದುವರಿಸುತ್ತಾರಾ, ಒಂದು ವೇಳೆ ಮುಂದುವರಿಸಿದರೆ ವಿರೋಧಿ ಬಣದ ಅಸಮಾಧಾನವನ್ನು ಹೇಗೆ ಶಮನ ಮಾಡಬಹುದು ಎಂಬ ಕುತೂಹಲವಿದೆ.