Select Your Language

Notifications

webdunia
webdunia
webdunia
webdunia

ಸುಪಾರಿ, ಹನಿಟ್ರ್ಯಾಪ್ ವಿಷಯ ಹೊರಬರಲು ಸಿಬಿಐ ತನಿಖೆ ಅನಿವಾರ್ಯ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಮಂಗಳವಾರ, 31 ಡಿಸೆಂಬರ್ 2024 (15:17 IST)
ಬೆಂಗಳೂರು: ಸಚಿನ್ ಪ್ರಾಣತ್ಯಾಗ ಯಾಕಾಗಿದೆ ಎಂದು ತನಿಖೆ ಮಾಡುವವರು ಹೇಳಬೇಕಿದೆ. ಸುಪಾರಿ ಕೊಟ್ಟ ವಿಷಯ, ಹನಿಟ್ರ್ಯಾಪ್ ವಿಷಯವೂ ಇದರ ಜೊತೆಗಿದ್ದು, ಇದು ಗಂಭೀರ ಸ್ವರೂಪದ್ದು. ಸುಪಾರಿಯಲ್ಲಿ ಮಹಾರಾಷ್ಟ್ರದ ಸೋಲಾಪುರದವರ ಹೆಸರುಗಳಿವೆ. ಇದು ಅಂತರರಾಜ್ಯ ವಿಚಾರವಾಗಿದ್ದು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಿಷಯವನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಮತ್ತು ನಮ್ಮ ನಾಯಕರಿಗೆ ಸವಾಲು ಹಾಕಿದ್ದಾರೆ. ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ. ಇದರರ್ಥ ಏನು? ಹೋರಾಟಕ್ಕೆ ಬೆಲೆ ಇಲ್ಲವೇ? ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
 
ಪ್ರಕರಣದ ಹಿಂದೆ ಎಲ್ಲ ಪ್ರಿಯಾಂಕ್ ಖರ್ಗೆಯವರ ಎಡಗೈ (ಲೆಫ್ಟ್ ಹ್ಯಾಂಡ್) ಬಲಗೈ (ರೈಟ್ ಹ್ಯಾಂಡ್) ಜನರೇ ಇದ್ದಾರೆ. ಆ ಕಾರಣದಿಂದ ನೀವು ವೈಯಕ್ತಿಕವಾಗಿ ಇದನ್ನು ತೆಗೆದುಕೊಳ್ಳದಿರಿ. ನನ್ನ ಮೇಲೆ ಆಪಾದನೆ ಬಂದುದು ಹಿಡಿಸಿಲ್ಲ; ಆದ್ದರಿಂದ ಯಾವುದೇ ರೀತಿಯ ತನಿಖೆಗೆ ಕೊಡಿ; ನಾನದನ್ನು ಎದುರಿಸುವೆ ಎಂಬ ಧೈರ್ಯ ನಿಮಗೆ ಇರಬೇಕು ಎಂದು ತಿಳಿಸಿದರು.
 
ಹೆದರಿಕೆಯಿಂದಿರುವ ಪ್ರಿಯಾಂಕ್, ಮುತ್ತಿಗೆ ಹಾಕುವವರ ಅಡ್ರೆಸ್ ಕೊಡಿ; ಎಷ್ಟು ಜನ ಬರುವುದಾಗಿ ಹೇಳಿ ಕಳಿಸಿ, ನಾನು ಕಾಫಿ ಟೀ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾರೆ. ಇದು ಉದ್ಧಟತನವಲ್ಲದೇ ಬೇರೇನು ಎಂದು ಕೇಳಿದರು. ನಿಮ್ಮ ಮನೆಯಲ್ಲಿ ಸಂಬಂಧ ಮಾಡಲು ಯಾರಾದರೂ ಬರುತ್ತಾರಾ ಎಂದು ಪ್ರಶ್ನಿಸಿದರು.
 
ನಾವು ಸಂಬಂಧ ಮಾಡಲು ಮುಂದಾಗಿಲ್ಲ; ವಿಪಕ್ಷದಲ್ಲಿದ್ದಾಗ ತಪ್ಪು ಮಾಡಿದ್ದನ್ನು ಕೇಳುವುದು ನಮ್ಮ ಅಧಿಕಾರ ಮತ್ತು ಹಕ್ಕು. ಉತ್ತರ ಹೇಗೆ ಕೊಡಬೇಕೆಂದು ಗೊತ್ತಾಗದೆ ಇದ್ದರೆ ಬೇರೆಯವರನ್ನು ಕೇಳಿ ತಿಳಿದುಕೊಳ್ಳಿ ಎಂದು ಆಕ್ಷೇಪಿಸಿದರು. ಎಲ್ಲದರಲ್ಲೂ ಬಾಯಿ ಹಾಕಲು ಗೊತ್ತಾಗುವ ಅವರಿಗೆ ಇದು ಗೊತ್ತಾಗುವುದಿಲ್ಲವೇ ಎಂದು ಕೇಳಿದರು.
 
ಮಾನ್ಯ ಸಚಿವರೇ ನಿಮ್ಮ ಉದ್ಧಟತನ ಬದಿಗಿಡಿ; ಸ್ವಪ್ರತಿಷ್ಠೆ ಇಲ್ಲಿಲ್ಲ; ನಿಮ್ಮನ್ನು ಟಾರ್ಗೆಟ್ ಮಾಡಿ ಬಿಜೆಪಿಗೆ ಏನೂ ಆಗಬೇಕಾಗಿಲ್ಲ. ಬಟ್ಟೆ ಹರಿದುಕೊಳ್ಳುವ ಕೆಲಸವನ್ನು ನೀವು ಮಾಡಿದ್ದೀರಿ. ನಿಮ್ಮ ಬಟ್ಟೆ ಹರಿಯಲು ನಾವು ಬರುವುದಿಲ್ಲ; ನಾವೂ ಬಟ್ಟೆ ಹರಿದುಕೊಳ್ಳುವುದಿಲ್ಲ. ಇದೆಲ್ಲವನ್ನು ಸಮಾಜದ ಹಿತದೃಷ್ಟಿಯಿಂದ ಮಾಡುತ್ತೇವೆ. ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕೆಂದು ತಾವು ಕಲಿತುಕೊಳ್ಳಬೇಕು. ನಾವು ನ್ಯಾಯ ಕೇಳುತ್ತಿದ್ದೇವೆ. ನೀವು ಭಿತ್ತಿಪತ್ರ ಅಂಟಿಸಿದ ಮಾದರಿಯಲ್ಲೇ ನಾವು ನಿಮ್ಮ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರ ಅಂಟಿಸಿದ್ದೇವೆ ಎಂದು ತಿಳಿಸಿದರು. ತೀರ್ಮಾನ ನಿಮಗೆ ಬಿಟ್ಟದ್ದು. ಆದರೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
 
ಬೀದರ್‍ನ ಸಚಿನ್ ಅವರ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ವಿಚಾರ ಈಗಾಗಲೇ ತಮ್ಮ ಮೂಲಕ ಜನರನ್ನು ತಲುಪಿದೆ ಎಂದರು. ಈ ವಿಷಯದಲ್ಲಿ ಸಚಿವ ಪ್ರಿಯಾಂಕ ಖರ್ಗೆಯವರ ಹೆಸರು ಪ್ರಸ್ತಾಪ ಆಗಿದ್ದು, ಬಿಜೆಪಿ ಮಾತ್ರವಲ್ಲದೆ, ಆ ಕುಟುಂಬ ಈ ವಿಚಾರವನ್ನು ತನಿಖೆಗೆ ಸಿಬಿಐಗೆ ಕೊಡುವಂತೆ ಒತ್ತಾಯಿಸುತ್ತಿದೆ ಎಂದು ವಿವರಿಸಿದರು.
 
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರವರು, ನಾನು ಮತ್ತು ಎಂಎಲ್‍ಸಿ ರವಿಕುಮಾರ್ ಅವರು ಆ ಕುಟುಂಬದವರನ್ನು ಭೇಟಿ ಮಾಡಿದ್ದೇವೆ. ಸ್ಥಳೀಯ ಮುಖಂಡರು ಮತ್ತು ಶಾಸಕರೆಲ್ಲರೂ ಅವತ್ತು ಸೇರಿದಾಗ ಕಾಂಗ್ರೆಸ್ಸಿನ ಸಚಿವ ಈಶ್ವರ ಖಂಡ್ರೆಯವರು ಮತ್ತು ಪೊಲೀಸರು ಬಂದಾಗ ಆ ಕುಟುಂಬ ಯಾರನ್ನೂ ಕೂಡ ತಮ್ಮ ಮನೆಯ ಒಳಗೆ ಬಿಡಲಿಲ್ಲ ಎಂಬ ವಿಷಯ ತಿಳಿಯಿತು ಎಂದು ತಿಳಿಸಿದರು.
ಒತ್ತಾಯದ ಮೇರೆಗೆ ಸಚಿವರು ಒಳಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದಾರೆ. ನಾವು ಹೋದಾಗ ಇಡೀ ಕುಟುಂಬ ನಮ್ಮನ್ನು ಸ್ವಾಗತಿಸಿತು. ಅದು ರಾಜಕೀಯ ಮಾಡುವ ಕುಟುಂಬವಲ್ಲ; ಅವರಿಗೆ ನ್ಯಾಯ ಸಿಗಬೇಕಿತ್ತು ಹೊರತು, ಬೇರೇನೂ ಬೇಕಿರಲಿಲ್ಲ ಎಂದು ಹೇಳಿದರು. ನಮ್ಮ ಕಾರ್ಯಕರ್ತರು ಮತ್ತು ಮುಖಂಡರು ಸೇರಿ 10 ಲಕ್ಷ ರೂ. ಹಣ ಜೋಡಿಸಿ ಅವರಿಗೆ ಕೊಡಲು ಹೋಗಿದ್ದೆವು. ಅವರು ಕೈಮುಗಿದು ‘ನಮಗೆ ಹಣ ಬೇಡ; ನ್ಯಾಯ ಬೇಕು’ ಎಂದು ತಿಳಿಸಿದರು ಎಂದರು.
ನಮ್ಮ ಕಣ್ಣ ಮುಂದೆ ಅವನ ಹೆಣ ಬಿದ್ದಾಗ 3 ರೈಲುಗಳು ಹಾದುಹೋಗಿವೆ. ನಮಗೆ ಕರುಳು ಕಿತ್ತು ಬಂದಿದೆ. ಪೊಲೀಸರು ನ್ಯಾಯ ಕೊಡಿಸುವ ಭರವಸೆ ಇಲ್ಲ; ಸಿಐಡಿ ತನಿಖೆ ಬೇಕಾಗಿಲ್ಲ. ಸಿಬಿಐಗೆ ಒಪ್ಪಿಸಿ ನ್ಯಾಯ ಕೊಡಿಸಿ ಎಂದು ಮೃತರ ಸೋದರಿಯರು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಲ್ಲಿ ಮರಣದಂಡನೆಗೆ ಗುರಿಯಾದ ಕೇರಳದ ನರ್ಸ್: ಕುಟುಂಬದ ನೆರವಿಗೆ ನಿಂತ ಭಾರತ