ಬೆಂಗಳೂರು: ರಾಜ್ಯದ ಖ್ಯಾತ ಪ್ರವಾಸೀ ತಾಣವಾಗಿರುವ ಮುರುಡೇಶ್ವರಕ್ಕೆ ಪ್ರವಾಸ ಹೋಗಲು ಬಯಸುವವರಿಗೆ ಜಿಲ್ಲಾಡಳಿತ ಈಗ ಗುಡ್ ನ್ಯೂಸ್ ನೀಡಿದೆ.
ಕೆಲವು ದಿನಗಳ ಹಿಂದೆ ವಿದ್ಯಾರ್ಥಿನಿಯರು ಸಾವನ್ನಪ್ಪಿದ ಹಿನ್ನಲೆಯಲ್ಲಿ ಮುರುಡೇಶ್ವರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಕಳೆದ 21 ದಿನಗಳಿಂದ ಮುರುಡೇಶ್ವರ ಕಡಲ ತೀರಕ್ಕೆ ಸುರಕ್ಷತಾ ದೃಷ್ಟಿಯಿಂದ ನಿಷೇಧ ಹೇರಲಾಗಿತ್ತು.
ಆದರೆ ಈಗ ಪ್ರವಾಸಿಗರಿಗೆ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದ್ದು, ಇದಾದ ಬಳಿಕ ಇದುವರೆಗೆ ಇದ್ದ ನಿರ್ಬಂಧ ಹಿಂಪಡೆಯಲಾಗಿದೆ. ಸಮುದ್ರಕ್ಕೆ ಇಳಿಯುವವರಿಗೆ ಸ್ವಿಮ್ಮಿಂಗ್ ಜೋನ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚುವರಿ ಲೈಫ್ ಗಾರ್ಡ್ ಗಳ ನೇಮಕ ಮಾಡಲಾಗಿದೆ.
ಸುರಕ್ಷತೆ ದೃಷ್ಟಿಯಿಂದ ವಾಚ್ ಟವರ್, ಆಕ್ಸಿಜನ್ ವ್ಯವಸ್ಥೆ, ಸೈರನ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಲೈಫ್ ಗಾರ್ಡ್ ಗಳಿಗೂ ಲೈಫ್ ಜಾಕೆಟ್ ವ್ಯವಸ್ಥೆ ಮಾಡಲಾಗಿದೆ. ನಿರ್ಬಂಧ ತೆರವು ಮಾಡಿದ ಬೆನ್ನಲ್ಲೇ ಸಾಕಷ್ಟು ಜನ ಪ್ರವಾಸಿಗರು ಮುರುಡೇಶ್ವರದತ್ತ ಬರುತ್ತಿದ್ದಾರೆ.