ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಗನಿಗೆ ಬುದ್ಧಿ ಹೇಳಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರೇ ನೀವಾದರೂ ಬುದ್ಧಿ ಹೇಳಿ. ಸುಪಾರಿ ಕೊಟ್ಟಂಥ ಇಷ್ಟು ದೊಡ್ಡ ಆರೋಪ ಯಾವ ಸಚಿವರ ಮೇಲೂ ಬಂದಿಲ್ಲ; ಆರೋಪಮುಕ್ತನಾಗುವವರೆಗೆ ನೀನು (ಪ್ರಿಯಾಂಕ ಖರ್ಗೆ) ಸಚಿವನಾಗಿ ಮುಂದುವರೆಯಬೇಡ ಎಂದು ನಿಮ್ಮ ಮಗನಿಗೆ ನೀವಾದರೂ ಬುದ್ಧಿ ಹೇಳಿ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಒತ್ತಾಯಿಸಿದರು.
ಸುಪಾರಿ ಕೊಡುವ ಸಚಿವ ಪ್ರಿಯಾಂಕ ಖರ್ಗೆಯವರನ್ನು ನೀವು ಹೇಗೆ ಸಚಿವಸಂಪುಟದಲ್ಲಿ ಇಟ್ಟುಕೊಳ್ಳುತ್ತೀರಿ ಸಿದ್ದರಾಮಯ್ಯನವರೇ? ಎಂದರಲ್ಲದೆ, ಭ್ರಷ್ಟಾಚಾರಕ್ಕಾಗಿ ಹಿಂಸಿಸಿ ಸಾವಿಗೆ ದುಷ್ಪ್ರೇರಣೆ ಆಗಿದ್ದು, ಅದರಲ್ಲಿ ನೇರವಾಗಿ ಸಚಿವರೇ ಭಾಗಿಯಾಗಿದ್ದಾರೆ. ಸುಪಾರಿ ಕೊಟ್ಟದ್ದಕ್ಕೆ ಬೆನ್ನಿಗೆ ನಿಂತರೆ ಸುಪಾರಿ ಕೊಟ್ಟಿದ್ದೀರೆಂದೇ ಅರ್ಥ. ಸಂವಿಧಾನದ ಬಗ್ಗೆ ಮಾತನಾಡುವ ಖರ್ಗೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಗ ಸುಪಾರಿಯಲ್ಲಿ ಭಾಗವಹಿಸಿದ್ದಾರೆ ಎಂದರೆ, ಇವರು ಸಚಿವರಾಗಿ ಒಂದು ಕ್ಷಣವೂ ಇರಬಾರದು ಎಂದು ಆಗ್ರಹಿಸಿದರು.
ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆಯವರು ಹೇಳಿದ್ದು, ನಿಮಗಾಗಿ ನಾವ್ಯಾಕೆ ಬಟ್ಟೆ ಹರಿದುಕೊಳ್ಳೋಣ ಎಂದು ಕೇಳಿದರು. ನಾವಿರೋದೇ ನಿಮ್ಮನ್ನು ರಾಜೀನಾಮೆ ಕೊಡಿಸೋದಕ್ಕೆ ಎಂದು ಸವಾಲು ಹಾಕಿದರು.
ಸರ್ವಖಾತೆಯ ಸಚಿವರು, ಎಲ್ಲ ವಿಚಾರದಲ್ಲಿ ಮೂಗು ತೂರಿಸುವ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಯಾವ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಘೋಷಿಸಿದ್ದಾರೆ. ಒಂದು ನಾಯಿ ಕುಂಟುತ್ತ ನಡೆದರೆ ಅದರ ಬಗ್ಗೆ ಮಾತನಾಡುವ ಸಚಿವ, ಒಬ್ಬ ವ್ಯಕ್ತಿ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರೆ ಅದರ ಬಗ್ಗೆ ಮಾತನಾಡುವ ಮನುಷ್ಯತ್ವವನ್ನು ಯಾಕೆ ಕಳಕೊಂಡರು ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆಯವರು ನಾನ್ಯಾಕ್ರಿ ರಾಜೀನಾಮೆ ಕೊಡಲಿ? ನನ್ನ ಹೆಸರು ಅದರಲ್ಲಿ ಉಲ್ಲೇಖಿಸಿದ್ದಾರಾ ಎಂದು ಕೇಳಿದ್ದಾರೆ. ಎಲ್ಲದರಲ್ಲಿ ಮೂಗು ತೂರಿಸುವ ಕೆಲಸದ ಒತ್ತಡದಲ್ಲಿ ಸಚಿನ್ ಪಾಂಚಾಳ ಅವರ ಡೆತ್ ನೋಟನ್ನು ವ್ಯವಧಾನದಿಂದ ಓದುವ ತಾಳ್ಮೆಯೂ ಅವರಿಗೆ ಇರಲಾರದು ಎಂದು ತಿಳಿಸಿದರು.
ಡೆತ್ ನೋಟಿನಲ್ಲಿ ಈ ರಾಜ್ಯ ಸರಕಾರದ ಭ್ರಷ್ಟಾಚಾರ ಬಯಲಾಗಿದೆ. ಸುಪಾರಿ ಕೊಡುವಂಥವರು ಈ ಸಚಿವ ಸಂಪುಟದ ಒಳಗಿದ್ದಾರೆ ಎಂಬುದು ಈ ಡೆತ್ ನೋಟಿನಲ್ಲಿ ಬಹಿರಂಗವಾಗಿದೆ. ಭ್ರಷ್ಟಾಚಾರದ ಕುರಿತಾಗಿ ಇಷ್ಟು ಪರ್ಸೆಂಟ್ ಕಮಿಷನ್ ಕೊಡಬೇಕೆಂದು ಹೇಳಿದ್ದಕ್ಕೆ ನಾನು ಹಣ ಹೊಂದಿಸಿದೆ. ಉಳಿದ ದುಡ್ಡಿಗಾಗಿ ಹಿಂಸಿಸಿದ್ದರು; ಜೀವ ಬೆದರಿಕೆ ಹಾಕಿದ್ದರು. ಜೀವ ಬೆದರಿಕೆ ಹಾಕಲು ಬೆನ್ನಿಗೆ ಯಾರು ನಿಂತರು ಎಂದು ಪ್ರಶ್ನಿಸಿದರು.
ಮನೆಗೆ ನುಗ್ಗಿ ಬಾಕಿ ದುಡ್ಡಿಗಾಗಿ ಬೆದರಿಕೆ ಹಾಕಲು ಹಿಂದೆ ನಿಂತ ಸಚಿವ ಯಾರು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಡೆತ್ ನೋಟಿನಲ್ಲಿ ಅವರು ಮಾನ್ಯ ಮಂತ್ರಿಗಳು (ಅಂದರೆ ಇದೇ ಪ್ರಿಯಾಂಕ್ ಖರ್ಗೆಯವರು) ಅಂದು ಇಜಾಜ್ ಹುಸೇನ್ ಅವರಿಗೆ ಟೆಂಡರ್ ಮಾಡಿಕೊಡು ಎಂದಿದ್ದಾರೆ. ಅದರ ಹಿನ್ನೆಲೆಯಲ್ಲೇ ಬೆದರಿಕೆ ಹಾಕಲಾಗಿದೆ ಎಂದು ವಿಶ್ಲೇಷಿಸಿದರು.
ವಸೂಲಿಗೆ ಹೋದ ಆರೋಪಿ ಹಿಂದೆ ಪ್ರಿಯಾಂಕ ಖರ್ಗೆ ಇದ್ದಾರೆಂದೇ ಡೆತ್ ನೋಟಿನ ಅರ್ಥ. ಭ್ರಷ್ಟಾಚಾರ ಆಗಿದ್ದು, ಆ ಆತ್ಮಹತ್ಯೆಗೆ ಪ್ರಿಯಾಂಕ ಖರ್ಗೆ ನೇರ ಕಾರಣ ಎಂದು ಆರೋಪಿಸಿದರು. ಸುಪಾರಿ ಕೊಟ್ಟು ಕೊಲೆ ಮಾಡಿಸುವುದು ಇಡೀ ದೇಶ ಬೆಚ್ಚಿ ಬೀಳಿಸುವ ಸುದ್ದಿ. ಯಾರ್ಯಾರಿಗೆ ಸುಪಾರಿ ಕೊಟ್ಟಿದ್ದೀರಿ? ಲಿಂಗಾಯತ ಸಮುದಾಯದ ಸ್ವಾಮೀಜಿ, ದಲಿತ ಸಮುದಾಯದ ಶಾಸಕ, ದಲಿತ ಮುಖಂಡ, ಬಿಜೆಪಿ ಜಿಲ್ಲಾಧ್ಯಕ್ಷರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದೀರಲ್ಲವೇ ಈ ಸರಕಾರದಲ್ಲಿ ಎಂದು ಕೇಳಿದರು.
ಆಂದೋಲ ಸ್ವಾಮಿ, ಚಂದು ಪಾಟೀಲ್, ಮಣಿಕಂಠ ರಾಠೋಡ, ಬಸವರಾಜ ಮತ್ತಿಮೂಡ ಇವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿದೆ; ಸುಪಾರಿ ಕೊಡಲಾಗಿದೆ. ಈತನ ಬೆನ್ನಿಗೆ ಮಾನ್ಯ ಮಂತ್ರಿಗಳು ಬೆಂಬಲವಾಗಿದ್ದಾರೆ ಎಂದು ತಿಳಿಸಿದ್ದು, ಪ್ರಿಯಾಂಕ ಖರ್ಗೆ ನೇರವಾಗಿ ಸುಪಾರಿಯಲ್ಲಿ ಭಾಗವಹಿಸಿದಂತೆ ಆಗಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.