ಬೆಂಗಳೂರು: ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದ್ದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಕುಮಾರಕೃಪ ವಸತಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಡ್ಡಾಜೀ ಅವರು ಒಂದು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದರು. ನಾವು ಸಹಜವಾಗಿಯೇ ಮಾತುಕತೆ ನಡೆಸಿದ್ದೇವೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದು ವಿವರ ನೀಡಿದರು.
ಸಂಘಟನೆಯ ಬಗ್ಗೆ ಕೇಳಿದ್ದು, ಎಲ್ಲವನ್ನೂ ಹೇಳಿದ್ದೇವೆ. ವಿರೋಧ ಪಕ್ಷ ನಾಯಕರಾಗಿ ಹೇಗೆ ಕೆಲಸ ಮಾಡ್ತಿದ್ದೀರಿ ಎಂದು ಕೇಳಿದ್ದು, ನಾವು ಮಾಡಿರುವ ಕೆಲಸಗಳ ಬಗ್ಗೆ, ಎಲ್ಲಾ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದ್ದೇವೆ ಎಂದು ತಿಳಿಸಿದರು.
ನಾನು, ವಿಪಕ್ಷ ನಾಯಕ ಆರ್.ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಎನ್. ರವಿಕುಮಾರ್, ಲೇಹರ್ ಸಿಂಗ್, ತೇಜಸ್ವಿಸೂರ್ಯ, ಎನ್. ಮುನಿರತ್ನ, ಸಿದ್ದು ಪಾಟೀಲ್ ಸೇರಿದಂತೆ ಅನೇಕ ನಾಯಕರು ಭೇಟಿ ಮಾಡಿದ್ದೇವೆ. ಪ್ರತ್ಯೇಕವಾಗಿ ಕರೆದು ಮಾತನಾಡಿದ್ದಾರೆ; ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ ಎಂಬ ವಿಷಯವನ್ನೂ ಚರ್ಚೆ ಮಾಡಿದ್ದೇವೆ; ಸರ್ಕಾರದ ಕಾರ್ಯವೈಖರಿ ಬಗ್ಗೆಯೂ ಪ್ರಸ್ತಾಪ ಮಾಡಿದ್ದೇವೆ ಎಂದು ತಿಳಿಸಿದರು.
ಭಿನ್ನರು ಇಂದು ಜೆ.ಪಿ ನಡ್ಡಾಜೀ ಅವರನ್ನು ಭೇಟಿ ಮಾಡಿಲ್ಲ ಅಂದರೆ ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಅಂತ ಅರ್ಥ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಭಿನ್ನಮತ ಇದ್ದರೆ ಅವರು ಜೆ.ಪಿ ನಡ್ಡಾ ಅವರನ್ನು ಭೇಟಿ ಆಗುತ್ತಿದ್ದರು ಎಂದು ನುಡಿದರು.
ಮುಡಾ, ವಾಲ್ಮೀಕಿ ನಿಗಮ, ಸಚಿನ್ ಆತ್ಮಹತ್ಯೆ ಕೇಸ್ ಬಗ್ಗೆಯೂ ಹೋರಾಟ ಮಾಡುತ್ತೇವೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.