ಬೆಂಗಳೂರು: ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಬಸ್ ಪ್ರಯಾಣ ದರ ರಾಜ್ಯ ಸರ್ಕಾರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್ ಕೊಟ್ಟಿದ್ದಾರೆ.
ಇಂದು ಮೆಜೆಸ್ಟಿಕ್ ನ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನಿಲ್ದಾಣಕ್ಕೆ ಆರ್ ಅಶೋಕ್ ನೇತೃತ್ವದಲ್ಲಿ ಭೇಟಿ ಕೊಟ್ಟ ಬಿಜೆಪಿ ನಿಯೋಗ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿತು. ಸಾರ್ವಜನಿಕರಿಗೆ ಬಸ್ ಪ್ರಯಾಣಿಕರಿಗೆ, ಚಾಲಕರಿಗೆ ಒಂದೊಂದು ಹೂಗುಚ್ಛ ನೀಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿತು. ಇನ್ನುಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಟಾಂಗ್ ಕೊಟ್ಟಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ಕಾಲದಲ್ಲೂ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಆಗ ಅವರಿಗೆ ಜನರ ಕಷ್ಟ ಅರಿವಾಗಲಿಲ್ವೇ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಜನರನ್ನು, ಅಭಿವೃದ್ಧಿಯನ್ನು ಮರೆತಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಡಾಲರ್ ಬೆಲೆ ಕುಸಿತವಾದರೂ ಕಳೆದ 9 ವರ್ಷಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿಲ್ಲ. ಬಿಜೆಪಿ ರಾಜ್ಯದಲ್ಲಿ 2020 ರಲ್ಲಿ ಅಧಿಕಾರದಲ್ಲಿದ್ದಾಗ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದರು. ಆಗ ಅವರಿಗೆ ಜನರ ಕಷ್ಟ ಕಾಣಲಿಲ್ಲವೇ ಎಂದು ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ನಿಗಮವನ್ನು ಲಾಭದಲ್ಲಿಟ್ಟಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ವೇತನ ಪರಿಷ್ಕರಣೆ, ನೇಮಕಾತಿ ಎಲ್ಲವನ್ನೂ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ರಾಮಲಿಂಗಾ ರೆಡ್ಡಿ ಟೀಕೆ ಮಾಡಿದ್ದಾರೆ.