ಬೆಳಗಾವಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಈಗಾಗಲೇ ಆಂತರಿಕ ತಿಕ್ಕಾಟ ಶುರುವಾಗಿದ್ದು, ಇದು ಯಾವುದೇ ಕ್ಷಣದಲ್ಲೂ ಸ್ಫೋಟವಾಗಿ ಸರ್ಕಾರ ಪತನವಾಗುವ ಸಾಧ್ಯತೆಯಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ರಾತ್ರಿ ಔತಣಕೂಟ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಉದ್ಭವವಾಗಿರುವ ಆಂತರಿಕ ತಿಕ್ಕಾಟದಿಂದ ನಾಳೆ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ ಎಂದರು.
ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ಹೋದಾಗ, ಸತೀಶ ಜಾರಕಿಹೊಳಿ ಮನೆಗೆ ಸಿದ್ದರಾಮಯ್ಯ ಹೋಗಿದ್ದಾರೆ. ಅದಲ್ಲದೆ ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು ಎಂದು ಸತೀಶ ಹೇಳಿರುವುದು, ಔತಣಕೂಟ ಆಯೋಜಿಸುವುದು, ಅದಕ್ಕೆ ಡಿಸಿಎಂ ಗೈರು ಆಗುವುದನ್ನು ಗಮನಿಸಿದರೆ, ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ನಡೆಯುತ್ತಿಲ್ಲ ಎಂಬುದಕ್ಕೆ ನಿದರ್ಶನ ಎಂದರು.
ಬಹುಮತ ಇದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಹೇಗೋ ನಡೆದಿದೆ. ಆದರೆ, ಸ್ವತಃ ಕಾಂಗ್ರೆಸ್‌ನ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿ ಕೆಲಸ ನಿಂತುಹೋಗಿದೆ. ಹತ್ತಾರು ಸಾವಿರ ಕೋಟಿ ರೂಪಾಯಿ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಒತ್ತಡದಲ್ಲಿದ್ದಾರೆ ಎಂದು ದೂರಿದರು.