ಶಿವಮೊಗ್ಗ: ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಳಿ ನಾನೇನೂ ಚಾಡಿ ಹೇಳಿಲ್ಲ. ಆದರೂ ಯುವಕನಾದ ನನಗೇ ಮತ್ತೊಮ್ಮೆ ರಾಜ್ಯಾಧ್ಯಕ್ಷ ಸ್ಥಾನ ಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯುವಕನಾದ ನಾನು ರಾಜ್ಯಾಧ್ಯಕ್ಷನಾಗಿ ಒಂದು ವರ್ಷ ಕಳೆದಿದೆ. ನಮ್ಮ ವರಿಷ್ಠರು, ಹಿರಿಯರು ಅವಕಾಶ ಕೊಟ್ಟಿದ್ದಾರೆ. ಒಂದು ವರ್ಷದಲ್ಲಿ ಶಕ್ತಿಮೀರಿ ಶ್ರಮ ಹಾಕಿದ್ದೇನೆ. ಭ್ರಷ್ಟಾಚಾರಗಳನ್ನು ಬಯಲಿಗೆ ತಂದು, ಹೋರಾಟ ಮಾಡಿ ರಾಜ್ಯ ಸರಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವ ಕೆಲಸವನ್ನು ಮಾಡಿದ್ದೇವೆ. ಎರಡನೇಯದಾಗಿ ಅನೇಕ ಹಿರಿಯರಿಗೆ ಮನವರಿಕೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ. ಯಾರೋ ಇಬ್ಬರು ಮೂವರು ಮಾತನಾಡುವವರನ್ನು ಬದಿಗಿಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ಸು ಲಭಿಸಿದೆ. ಮುಂದೆ ಪಕ್ಷ ಸಂಘಟಿಸಿ ಬಿಜೆಪಿಯನ್ನು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಯಶಸ್ವಿಯಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ಸಮಸ್ಯೆಗೆ ಶೀಘ್ರವೇ ಪರಿಹಾರ
ಹೈಕಮಾಂಡಿಗೆ ಕರ್ನಾಟಕವೊಂದೇ ಅಲ್ಲ; ಮಹಾರಾಷ್ಟ್ರ ಸೇರಿ ಅನೇಕ ಚುನಾವಣೆಗಳು ನಡೆದಿವೆ. ಇನ್ನು ಕರ್ನಾಟಕವನ್ನು ಆದ್ಯತೆಯಿಂದ ಪರಿಗಣಿಸಲಿದ್ದಾರೆ. ನಾನು ಮೊನ್ನೆ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ, ಗೃಹ ಸಚಿವರಾದ ಅಮಿತ್ ಶಾ ಜೀ ಅವರಿಗೂ ಮನವಿ ಮಾಡಿದ್ದೇನೆ. ಚಾಡಿ ಹೇಳಿದ್ದಲ್ಲ; ರಾಜ್ಯಾಧ್ಯಕ್ಷನಾಗಿ ರಾಜ್ಯದ ವಿದ್ಯಮಾನ, ವಾಸ್ತವಿಕ ಪರಿಸ್ಥಿತಿಯನ್ನು ಅವರ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ಅತಿಶೀಘ್ರವೇ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾರೆ. ಇತಿಶ್ರೀ ಹಾಕುವ ಕೆಲಸವನ್ನು ಕೇಂದ್ರದ ವರಿಷ್ಠರು ಮಾಡುತ್ತಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಜಕೀಯ ವ್ಯವಸ್ಥೆಯಲ್ಲಿ ಷಡ್ಯಂತ್ರಗಳು ಸಹಜ; ಅವನ್ನು ಜೀರ್ಣಿಸಿಕೊಂಡು ಪಕ್ಷ ಸಂಘಟಿಸುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ. ಪಕ್ಷದ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.