ಬೆಂಗಳೂರು: ಹೊಸ ವರ್ಷದ ಹೊಸ್ತಿಲಲ್ಲೇ ಬಸ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರದ ಪರಿಷ್ಕೃತ ದರ ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಸಾರಿಗೆ ಇಲಾಖೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆಗೊಳಿಸಿದೆ. ಶೇ 15 ರಷ್ಟು ದರ ಹೆಚ್ಚು ಮಾಡಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ಬಸ್ ಪ್ರಯಾಣಿಕರಿಗೆ ಹೊಸ ಟಿಕೆಟ್ ದರದ ಬಿಸಿ ತಟ್ಟಿದೆ.
ಸಾರಿಗೆ ಇಲಾಖೆ ನೂತನ ದರಪಟ್ಟಿ ಬಿಡುಗಟೆ ಮಾಡಿದೆ. 50 ರಿಂದ 100 ರೂಪಾಯಿಯಷ್ಟು ಟಿಕೆಟ್ ದರ ಹೆಚ್ಚಳವಾಗಿದೆ. ಕೆಎಸ್ಆರ್ ಟಿಸಿ ಪಾಸ್ 150 ರಿಂದ 200 ರೂಪಾಯಿವರೆಗೆ ಹೆಚ್ವಳವಾಗಿದ್ದರೆ, ಬಿಎಂಟಿಸಿ ಪಾಸ್ ದರ 100 ರಿಂದ 150 ರೂಪಾಯಿವರೆಗೆ ಏರಿಕೆ ಆಗಿದೆ. ಬಸ್ ದರ ಏರಿಕೆಯ ನಿರ್ಧಾರಕ್ಕೆ ವಿಪಕ್ಷಗಳು, ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ ಸರ್ಕಾರ ಕೊನೆಗೂ ಬಸ್ ಪ್ರಯಾಣ ದರ ಏರಿಕೆ ಮಾಡಿದೆ.
ಸಾರ್ವಜನಿಕರು ಆಕ್ರೋಶ: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹೀಗೆ ಎಲ್ಲದಕ್ಕೂ ದರ ಹೆಚ್ಚಿಸಿದರೆ, ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಹಿಳೆಯರು ಕೂಡ ಪುರುಷರ ಪರ ನಿಂತು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ನಮಗೆ ಫ್ರೀ ಟಿಕೆಟ್ ಬೇಡವೇ ಬೇಡ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಮಹಿಳೆಯರಿಗೆ ಫ್ರೀ ಬಸ್ ಟಿಕೆಟ್ ಕೊಡುವ ಅವಶ್ಯಕತೆಯೇ ಇರಲಿಲ್ಲ. ನಿತ್ಯ ಪ್ರಯಾಣಕ್ಕೆ ತುಂಬಾ ಕಷ್ಟ ಆಗ್ತಿದೆ. ಬಸ್ ವ್ಯವಸ್ಥೆ ಕೂಡ ಕಡಿಮೆ ಆಗಿ, ತುಂಬಾ ರಷ್ ಆಗ್ತಿದೆ. ಕಾಲೇಜು, ಆಫೀಸ್‌ಗೆ ಹೋಗುವವರಿಗೆ ತುಂಬಾ ಸಮಸ್ಯೆ ಆಗ್ತಿದೆ ಎಂದು ಮಹಿಳೆಯೊಬ್ಬರು ಟಿಕೆಟ್ ದರ ಏರಿಕೆಗೆ ಬೇಸರ ಹೊರಹಾಕಿದ್ದಾರೆ.