ನವದೆಹಲಿ: ಇದುವರೆಗೆ ಕಾರು ಎಂದರೆ ಮಾರುತಿ ಎನ್ನುವ ಸ್ಥಿತಿಯಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಆ ಟ್ರೆಂಡ್ ಬದಲಾಗಿದೆ. ಇದೀಗ ನಮ್ಮ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗಿ ನಂ.1 ಎನಿಸಿಕೊಂಡಿರುವ ಕಾರು ಯಾವುದು ಗೊತ್ತಾ? ಇಲ್ಲಿದೆ ವಿವರ.
ಒಂದು ಕಾಲದಲ್ಲಿ ಕಾರು ಎಂದರೆ ಅಂಬಾಸಿಡರ್ ಮತ್ತು ಮಾರುತಿ ಎರಡೇ ಎನ್ನುವ ಸ್ಥಿತಿಯಿತ್ತು. ಆದರೆ ಈಗ ಥರಹೇವಾರಿ ಲಕ್ಷದಿಂದ ಕೋಟಿ ಬೆಲೆ ಬಾಳುವ ಕಾರುಗಳು ಬಂದಿವೆ. ಅದರಲ್ಲೂ ಕಾರು ಎಂದರೆ ಮಾರುತಿ ಕಂಪನಿಯದ್ದು ಮಾತ್ರ ಎನ್ನುವ ಸ್ಥಿತಿಯಿಲ್ಲ.
ನಮ್ಮ ದೇಶದಲ್ಲಿ ಈಗ ಮಾರುತಿ ಕಂಪನಿಯನ್ನೂ ಹಿಂದಿಕ್ಕಿ ಟಾಟಾ ಸಂಸ್ಥೆ ನಂ.1 ಕಾರು ಮಾರಾಟ ಮಾಡುವ ಕಂಪನಿಯಾಗಿ ಹೊರಹೊಮ್ಮಿದೆ. ಆ ಮೂಲಕ ವಿದೇಶೀ ಮೂಲದ ಮಾರುತಿಯನ್ನು ಹಿಂದಿಕ್ಕಿ ನಮ್ಮದೇ ದೇಶದ ಟಾಟಾ ಸಂಸ್ಥೆ ನಂ.1 ಆಗಿದೆ.
2024 ರಲ್ಲಿ ಟಾಟಾ ಸಂಸ್ಥೆಯ ಟಾಟಾ ಪಂಚ್ ಕಾರು ಅತೀ ಹೆಚ್ಚು ಮಾರಾಟವಾಗಿ ನಂ.1 ಪಟ್ಟಕ್ಕೇರಿದೆ. 2024 ರಲ್ಲಿ ಒಟ್ಟು 2,02,030 ಟಾಟಾ ಪಂಚ್ ಕಾರುಗಳು ಮಾರಾಟವಾಗಿದ್ದವು. ಒಂದು ಮಧ್ಯಮ ವರ್ಗದ ಕುಟುಂಬವೂ ಖರೀದಿ ಮಾಡಬಹುದಾದ ಮತ್ತು ಒಂದು ಕುಟುಂಬ ಸಮೇತ ಕಂಪರ್ಟೇಬಲ್ ಆಗಿ ಪ್ರಯಾಣ ಮಾಡಬಹುದಾದ ಕಾರು ಇದಾಗಿದ್ದು, ಭಾರೀ ಬೇಡಿಕೆ ಪಡೆದುಕೊಂಡಿದೆ. ಮಾರುತಿ ವೇಗನಾರ್, ಮಾರುತಿ ಎಸ್ ಯುವಿ ಕಾರುಗಳನ್ನೂ ಹಿಂದಿಕ್ಕಿ ಈಗ ಟಾಟಾ ಕಾರು ನಂ.1 ಆಗಿದೆ.
ಟಾಟಾ ಪಂಚ್ ಕಾರು ಬೆಲೆ ಎಷ್ಟಿದೆ
ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಕಾರು ಬೆಲೆ 6 ಲಕ್ಷ ರೂ.ಗಳಿಂದ ತೊಡಗಿ 10 ಲಕ್ಷ ರೂ.ವರೆಗೂ ಇದೆ. ಇದರ ಬಣ್ಣ, ಮಾಡೆಲ್ ಗಳಿಗೆ ಸಂಬಂಧಪಟ್ಟಂತೆ ಬೆಲೆಯಲ್ಲೂ ವೈವಿಧ್ಯತೆಯಿದೆ. 5 ಸೀಟರ್ ಕಾರು ಇದಾಗಿದ್ದು ಒಂದು ಪರಿಪೂರ್ಣ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ.