ಮುಂಬೈ: ಎಂಟು ಗಂಟೆ ಕೆಲಸ ಮಾಡುತ್ತಾ ಕೂತರೆ ಹೆಂಡತಿ ಓಡಿ ಹೋಗ್ತಾಳೆ ಎನ್ನುವ ಉದ್ಯಮಿ ಗೌತಮ್ ಅದಾನಿ ಹೇಳಿಕೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಹಿಂದೆ ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಆದರೆ ಈಗ ಗೌತಮ್ ಅದಾನಿ ಈ ಹೇಳಿಕೆಗೆ ಟಾಂಗ್ ಕೊಟ್ಟಂತಿದೆ. ಅದಾನಿ ಸಂದರ್ಶನವೊಂದರಲ್ಲಿ ಹಾಸ್ಯಭರಿತವಾಗಿ ನೀಡಿದ್ದ ಹೇಳಿಕೆ ಈಗ ವೈರಲ್ ಆಗಿದೆ.
ಕೆಲಸ-ಜೀವನದ ಬಗ್ಗೆ ಸಂದರ್ಶನವೊಂದರಲ್ಲಿ ಗೌತಮ್ ಅದಾನಿ ಈ ರೀತಿ ಹೇಳಿಕೆ ನೀಡಿದ್ದಾರೆ. ನಾನು ನನ್ನ ಕುಟುಂಬದ ಜೊತೆ 4 ಗಂಟೆ ಸಮಯ ಕಳೆಯುತ್ತೇನೆ. ಅದು ನನಗೆ ಖುಷಿ ಕೊಡುತ್ತದೆ. ಉಳಿದ 8 ಗಂಟೆಯೂ ಕೆಲಸ ಮಾಡುತ್ತಾ ಕೂತರೆ ನನ್ನ ಹೆಂಡತಿ ನನ್ನ ಬಿಟ್ಟು ಹೋಗುತ್ತಾಳೆ ಎಂದು ಹಾಸ್ಯ ಮಾಡಿದ್ದಾರೆ.
ಯಾವುದೇ ಕೆಲಸವನ್ನೇ ಆದರೂ ಇಷ್ಟಪಟ್ಟು ಮಾಡಬೇಕು. ನಮಗೆ ಇಷ್ಟವಾದ ಕೆಲಸ ಮಾಡುತ್ತಿದ್ದರೆ ಮಾತ್ರ ಜೀವನದಲ್ಲಿ ಸಮತೋಲನವಿರುತ್ತದೆ. ಕೆಲವು ದಿನಗಳ ಹಿಂದಷ್ಟೇ ನಾರಾಯಣ ಮೂರ್ತಿಯವರು ದೇಶ ಅಭಿವೃದ್ಧಿಯಾಗಬೇಕಾದರೆ ಕೆಲಸದ ಅವಧಿ ಹೆಚ್ಚಾಗಬೇಕು ಎಂದಿದ್ದರು. ಆದರೆ ಈಗ ಅದಾನಿ ಅದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ.