ಬೆಂಗಳೂರು: ನೋಟು ನಿಷೇಧದ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2,000 ರೂ. ನೋಟು ಜಾರಿಗೆ ತಂದಿತ್ತು. ಆದರೆ ಮತ್ತೆ ಅದನ್ನು ಹಿಂಪಡೆದಿತ್ತು. ಹೀಗಾಗಿ ನಿಮ್ಮಲ್ಲಿ 2,000 ರೂ. ನೋಟಿದ್ದರೆ ಅದನ್ನು ಮರಳಿಸುವುದು ಹೇಗೆ ಎಂಬ ಚಿಂತೆಯೇ? ಇದಕ್ಕೆ ಇಲ್ಲಿದೆ ಪರಿಹಾರ.
2023 ರ ಮೇ 19 ರಂದು 2,000 ರೂ ನೋಟು ಹಿಂಪಡೆಯುವುದಾಗಿ ಆರ್ ಬಿಐ ಘೋಷಣೆ ಮಾಡಿತ್ತು. ಆರ್ ಬಿಐ ಘೋಷಿಸಿದ ಬಳಿಕ 3.56 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ಈಗಾಗಲೇ ಶೇ.98 ರಷ್ಟು 2000 ರೂ. ನೋಟು ಹಿಂಪಡೆದಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆ ಮಾಡಿದೆ. ಇದೀಗ ಕೇವಲ 6,691 ಕೋಟಿ ರೂ. ನೋಟು ಹಿಂದಿರುಗಿಸಲು ಬಾಕಿಯಿದೆ.
2023 ಅಕ್ಟೋಬರ್ ರವರೆಗೆ ನಿಮ್ಮಲ್ಲಿರುವ 2,000 ನೋಟು ಬ್ಯಾಂಕ್ ನಲ್ಲಿ ಠೇವಣಿ ಇಡಲು ಅವಕಾಶ ನೀಡಲಾಗಿತ್ತು. ಆ ಬಳಿಕ 19 ವಿತರಣಾ ಕಚೇರಿಗಳಲ್ಲಿ ನೋಟು ವಾಪಸಾತಿಗೆ ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಇನ್ನೂ ಕೆಲವರಲ್ಲಿ 2,000 ರೂ ನೋಟು ಬಾಕಿಯಿದೆ.
ಇಂತಹವರಿಗಾಗಿ ದೇಶದ ಕೆಲವು ಕೇಂದ್ರಗಳಲ್ಲಿ ಠೇವಣಿ ನೀಡಲು ಅವಕಾಶ ನೀಡಲಾಗಿದೆ. ಅದರಲ್ಲಿ ಬೆಂಗಳೂರೂ ಒಂದಾಗಿದೆ. ಬೆಂಗಳೂರು ಅಲ್ಲದೆ ಆರ್ ಬಿಐನ ಅಹಮ್ಮದಾಬಾದ್, ಚೆನ್ನೈ, ಚಂಢೀಘಡ, ಬೇಲಾಪುರ, ಭೋಪಾಲ್, ಭುವನೇಶ್ವರ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು-ಕಾಶ್ಮೀರ, ಕೋಲ್ಕತ್ತಾ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ತಿರುವನಂತರಪುರಂ ಕಚೇರಿಗಳಿಗೆ ತೆರಳಿ ವಿನಿಯಮ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.