ನವದೆಹಲಿ: ಕೇಂದ್ರ ಬಜೆಟ್ 2025 ರನ್ನು ಸದ್ಯದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ನಿಮ್ಮ ನಿರೀಕ್ಷೆಗಳೇನು ಮತ್ತು ಈ ಬಾರಿ ಯಾವೆಲ್ಲಾ ಬದಲಾವಣೆ ನಿರೀಕ್ಷಿಬಹುದು ನೋಡೋಣ.
ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ನಲ್ಲಿ ಈ ಬಾರಿ ನಿಮಗೆ ಹಲವು ನಿರೀಕ್ಷೆಗಳಿರಬಹುದು. ಕಳದ ವರ್ಷದ ಅಂತ್ಯಕ್ಕೆ ಜಿಡಿಪಿ ಕೊಂಚ ಕಡಿಮೆಯಾಗಿತ್ತು. ಅದೀಗ ಹಳಿಗೆ ಬರುವ ಲಕ್ಷಣ ಕಾಣುತ್ತಿದೆ. ಜಿಡಿಪಿ ಇನ್ನಷ್ಟು ಪ್ರಬಲವಾಗಲು ನಿರ್ಮಲಾ ಯಾವ ಕ್ರಮ ಕೈಗೊಳ್ಳಲಿದ್ದಾರೆ ನೋಡಬೇಕಿದೆ.
ಈ ಬಾರಿ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಳ ಮಾಡಬಹುದೇ ಎಂಬ ನಿರೀಕ್ಷೆ ಜನರಲ್ಲಿದೆ. ತೆರಿಗೆ ಮಿತಿಯನ್ನು ಹೆಚ್ಚಳ ಮಾಡುವುದರಿಂದ ಮಧ್ಯಮ ವರ್ಗದ ಜನರಿಗೆ ನಿರಾಳವಾಗಲಿದೆ.
ಇನ್ನು ಈ ಬಾರಿ ಬಜೆಟ್ ನಲ್ಲಿ ತೈಲ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಹಣದುಬ್ಬರ ನಿಯಂತ್ರಣ ಮಾಡಲು ಇದೂ ಒಂದು ಮಾರ್ಗವಾಗಿದೆ. ಹೀಗಾಗಿ ನಿರ್ಮಲಾ ಬಜೆಟ್ ನಲ್ಲಿ ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರ ಆರ್ಥಿಕ ಹೊರೆ ತಗ್ಗಿಸುವ ಕೆಲಸವಾಗಬೇಕಿದೆ.
ಇನ್ನು, ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಬಜೆಟ್ ನಲ್ಲಿ ಘೋಷಿಸಿದಂತೆ ಯುವ, ವಿದ್ಯಾವಂತರಿಗೆ ಕೆಲವೊಂದು ಪ್ರೋತ್ಸಾಹಕರ ಯೋಜನೆಗಳು, ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಗ್ರಾಮೀಣ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುವ ನಿರೀಕ್ಷೆಯಿದೆ. ಅದಲ್ಲದೆ ಎಂದಿನಂತೆ ಸ್ವದೇಶೀ ಉತ್ಪನ್ನಗಳ ಪ್ರೋತ್ಸಾಹಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವಂತಹ ಯೋಜನೆಗಳು ಬರಬಹುದು ಎಂದು ನಿರೀಕ್ಷಿಸಲಾಗಿದೆ.