ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಈ ಸರ್ಕಾರದಲ್ಲಿ 60 ಪರ್ಸೆಂಟ್ ಕಮಿಷನ್ ಕೊಟ್ಟರೆ ಮಾತ್ರ ಕೆಲಸವಾಗೋದು ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ವಿಪಕ್ಷವಾಗಿದ್ದಾಗ ಆಡಳಿತಾರೂಢ ಬಿಜೆಪಿ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿತ್ತು. ಆದರೆ ಈಗ ಕುಮಾರಸ್ವಾಮಿ ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ 60 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ ಕುಮಾರಸ್ವಾಮಿ ಈ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಲ್ಲಿ ಶೇ.60 ರಷ್ಟು ಕಮಿಷನ್ ಇದೆ ಎಂದು ಅವರ ಕಾಂಗ್ರೆಸ್ ಗುತ್ತಿಗೆದಾರರೇ ಹೇಳುತ್ತಿದ್ದಾರೆ. ವಿಧಾನಸೌಧದಲ್ಲೇ ಮಂತ್ರಿಗಳಿಗೆ ಕಮಿಷನ್ ಹೋಗುತ್ತದೆ. ಪ್ರತೀ ಇಲಾಖೆಯಲ್ಲೂ ಸಚಿವರಿಗೆ ಇಂತಿಷ್ಟು ಎಂದು ಕಮಿಷನ್ ಹೋಗಿಯೇ ಕೆಲಸಕ್ಕೆ ಹಣ ಬಿಡುಗಡೆಯಾಗುತ್ತದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇನ್ನು, ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸೇರಿದಂಥೆ ಕಾಂಗ್ರೆಸ್ ನಾಯಕರು, ಕುಮಾರಸ್ವಾಮಿಯವರು ಯಾವತ್ತೂ ಬಾಯಿ ಚಪಲಕ್ಕೆ ಮಾತನಾಡುತ್ತಾರೆ. ಕೇವಲ ಆರೋಪ ಮಾಡಿದರೆ ಸಾಲದು. ಅದನ್ನು ಸಾಬೀತುಪಡಿಸಲಿ ಎಂದಿದ್ದಾರೆ.