ಮುಂಬೈ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾ ಘೋಷಣೆ ಯಾವಾಗ ಮತ್ತು ಯಾವ ಸ್ಟಾರ್ ಕ್ರಿಕೆಟಿಗರಿಗೆ ಆಯ್ಕೆ ಸಮಿತಿ ಕೊಕ್ ನೀಡುತ್ತೆ ಎಂಬ ಕುತೂಹಲ ಎಲ್ಲರಲ್ಲಿದೆ.
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ಈಗ ಫಾರ್ಮ್ ನಲ್ಲಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸೋಲು ಅನುಭವಿಸಿದ ಮೇಲೆ ಆಡದ ಸ್ಟಾರ್ ಕ್ರಿಕೆಟಿಗರಿಗೆ ಮುಲಾಜಿಲ್ಲದೇ ಕೊಕ್ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ.
ಹೀಗಾಗಿ ಆಯ್ಕೆ ಸಮಿತಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಮಾಡುತ್ತಾ ನೋಡಬೇಕಿದೆ. ಸದ್ಯಕ್ಕೆ ರೋಹಿತ್, ಕೊಹ್ಲಿ ಜೊತೆಗೆ ರಿಷಭ್ ಪಂತ್, ರವೀಂದ್ರ ಜಡೇಜಾ, ಕೆಎಲ್ ರಾಹುಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.
ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ನಡೆಯಲಿದೆ. ಈ ಬಾರಿ ಪಾಕಿಸ್ತಾನದ ಆತಿಥ್ಯದಲ್ಲಿ ಪಂದ್ಯ ನಡೆಯುತ್ತಿದೆ. ಭಾರತ ಆಡುವ ಪಂದ್ಯಗಳು ಮಾತ್ರ ಯುಎಇನಲ್ಲಿ ನಡೆಯಲಿದೆ. ಜನವರಿ 12 ರ ಒಳಗಾಗಿ ಎಲ್ಲಾ ತಂಡಗಳೂ ತಮ್ಮ ತಂಡವನ್ನು ಪ್ರಕಟಿಸಬೇಕಾಗಿದೆ. ಅದರಂತೆ ಟೀಂ ಇಂಡಿಯಾ ಜನವರಿ 11 ರಂದು ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ, ರೋಹಿತ್ ಗೆ ನಾಯಕತ್ವದಿಂದ ಕೊಕ್ ನೀಡಲಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲಿದೆ.