ಸಿಡ್ನಿ: ಟೀಂ ಇಂಡಿಯಾಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಈಗ ಕಳೆದ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಯಾರೂ ಅವರನ್ನು ಕ್ಯಾರೇ ಮಾಡದ ಸ್ಥಿತಿಗೆ ತಲುಪಿದ್ದಾರೆಯೇ? ಹೀಗೊಂದು ವಿಡಿಯೋ ಈಗ ವೈರಲ್ ಆಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆಯಲ್ಲಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ತಂಡದ ಬ್ಯಾಟಿಂಗ್ ತಳಮಟ್ಟದಲ್ಲಿದೆ. ಹೀಗಾಗಿ ಅಭಿಮಾನಿಗಳು ತೀವ್ರ ಆಕ್ರೋಶಗೊಂಡಿದ್ದಾರೆ.
ಟಿ20 ವಿಶ್ವಕಪ್ ಗೆದ್ದು ಕೊಟ್ಟಾಗ ರೋಹಿತ್ ಶರ್ಮಾರನ್ನು ತಲೆಮೇಲೆ ಎತ್ತಿ ಕೂರಿಸಿದ್ದ ಅಭಿಮಾನಿಗಳು ಈಗ ಅಷ್ಟೇ ಬೇಸರ ಹೊರಹಾಕುತ್ತಿದ್ದಾರೆ. ಎಷ್ಟೆಂದರೆ ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾ ನಾಯಕನನ್ನು ಅಭಿಮಾನಿಗಳು ಕ್ಯಾರೇ ಎನ್ನುತ್ತಿಲ್ಲವೇನೋ ಎಂದು ಅನುಮಾನ ಮೂಡಿಸುವಂತಹ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸೀಸ್ ಪ್ರಧಾನಿಯನ್ನು ಭೇಟಿ ಮಾಡಲು ಹೋಗಿದ್ದಾಗ ಈ ವಿಡಿಯೋ ಮಾಡಲಾಗಿತ್ತು ಎನಿಸುತ್ತಿದೆ. ಆದರೆ ಈಗ ಇದನ್ನು ವೈರಲ್ ಮಾಡಿರುವ ಅಭಿಮಾನಿಗಳು ರೋಹಿತ್ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ತಂಡದ ಬಸ್ ಏರಲು ಎಲ್ಲಾ ಆಟಗಾರರು ಬರುವಾಗ ಮೊದಲು ವಿರಾಟ್ ಕೊಹ್ಲಿ ಬರುತ್ತಾರೆ. ಅವರ ಮೇಲೆಯೇ ಎಲ್ಲಾ ಕ್ಯಾಮರಾಗಳು, ಅಭಿಮಾನಿಗಳು ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಿಗಳು ಆಟೋಗ್ರಾಫ್ ಗಾಗಿ ಕೊಹ್ಲಿಯ ಹಿಂದೆ ಬೀಳುತ್ತಾರೆ. ಆದರೆ ಅವರ ಹಿಂದೆಯೇ ಇತರೆ ಆಟಗಾರರೊಂದಿಗೆ ಬರುವ ರೋಹಿತ್ ರನ್ನು ಯಾರೂ ಕ್ಯಾರೇ ಮಾಡುತ್ತಿಲ್ಲ. ಕೊಹ್ಲಿ ಪಕ್ಕದಲ್ಲೇ ಜಾಗ ಮಾಡಿಕೊಂಡು ರೋಹಿತ್ ಬಸ್ ಏರುತ್ತಾರೆ.