ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅಭ್ಯಾಸದ ವೇಳೆ ಮತ್ತೋರ್ವ ಸ್ಟಾರ್ ಆಟಗಾರ ಗಾಯಗೊಂಡು ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಪರ್ತ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಶುಭ್ ಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಫೀಲ್ಡಿಂಗ್ ಮಾಡುವಾಗ ಗಿಲ್ ಹೆಬ್ಬೆರಳಿಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ ವೈದ್ಯರು ಅವರಿಗೆ ಸ್ಕ್ಯಾನ್ ಮಾಡಲಾಗಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಗಿಲ್ ಅವರ ಎಡಗೈ ಹೆಬ್ಬೆರಳು ಮುರಿತವಾಗಿದ್ದು, ಅವರಿಗೆ ಚೇತರಿಸಿಕೊಳ್ಳಲು ಕನಿಷ್ಟ 15 ದಿನ ಕಾಲಾವಕಾಶ ಬೇಕು ಎನ್ನಲಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನು ಕೇವಲ ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಮೊದಲ ಪಂದ್ಯದಿಂದ ಬಹುತೇಕ ಗಿಲ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈಗಾಗಲೇ ತಂಡದ ನಾಯಕ ರೋಹಿತ್ ಶರ್ಮಾ ವೈಯುಕ್ತಿಕ ಕಾರಣದಿಂದ ಮೊದಲ ಟೆಸ್ಟ್ ಗೆ ಲಭ್ಯರಾಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದ್ದು, ಅವರ ಬದಲಿಗೆ ಗಿಲ್ ಜೊತೆ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ತೆರೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಗಿಲ್ ಕೂಡ ಗಾಯಗೊಂಡಿದ್ದು ಇದು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗಾಗಲೇ ಭಾರತ ತಂಡದ ಕೆಎಲ್ ರಾಹುಲ್ ಗಾಯಗೊಂಡಿದ್ದು, ಪ್ರಸಿದ್ಧ್ ಕೃಷ್ಣ ಶಾರ್ಟ್ ಬಾಲ್ ಬಡಿದು ರಾಹುಲ್ ಮೊಣಕೈಗೆ ಗಾಯವಾಗಿತ್ತು. ಇದೀಗ ಅದರ ಬೆನ್ನ ಹಿಂದೆಯೇ ಗಿಲ್ ಕೂಡ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿಯುವ ಆತಂಕ ಎದುರಾಗಿದೆ.