ಮುಂಬೈ: ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮಾತ್ರವಲ್ಲ, ಗೌತಮ್ ಗಂಭೀರ್ ಗೂ ಗಂಡಾಂತರ ಕಾದಿದೆ.
ಟೆಸ್ಟ್ ಸರಣಿ ಸೋಲಿನ ಬಳಿಕ ಗಂಭೀರ್ ಕೋಚ್ ಸ್ಥಾನದಿಂದ ಕಿತ್ತೊಗೆಯಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಸದ್ಯಕ್ಕೆ ಇದು ಗಂಭೀರ್ ಕೋಚ್ ಆದ ಆರಂಭಿಕ ಅವಧಿಯಾಗಿದ್ದರಿಂದ ಅವರನ್ನು ವಜಾಗೊಳಿಸುವ ಸಾಧ್ಯತೆಯಂತೂ ಇಲ್ಲ. ಆದರೆ ಅವರಿಗಿದ್ದ ಕೆಲವೊಂದು ಪರಮಾಧಿಕಾರಗಳನ್ನು ಕಿತ್ತೊಗೆಯುವ ಸಾಧ್ಯತೆಯಿದೆ.
ಗೌತಮ್ ಗಂಭೀರ್ ಗೆ ತಂಡದ ಆಯ್ಕೆ ವಿಚಾರದಲ್ಲಿ ಇದ್ದ ಪರಮಾಧಿಕಾರಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ. ಗೌತಮ್ ಗಂಭೀರ್ ಬೇಡಿಕೆಯಿಟ್ಟಿದ್ದ ಸಹಾಯಕ ಸಿಬ್ಬಂದಿಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ನೀಡಿಯೂ ತಂಡ ವಿಫಲವಾಗಿರುವುದಕ್ಕೆ ಬಿಸಿಸಿಐ ಅಸಮಾಧಾನಗೊಂಡಿದೆ ಎನ್ನಲಾಗಿದೆ.
ಹೀಗಾಗಿ ಈಗ ಈ ಸೋಲಿನ ಬಗ್ಗೆ ಮತ್ತು ಮುಂದಿನ ಸರಣಿಗಳ ಯೋಜನೆಗಳ ಬಗ್ಗೆ ಗಂಭೀರ್ ಜೊತೆ ಬಿಸಿಸಿಐ ಚರ್ಚೆ ನಡೆಸುವ ಸಾಧ್ಯತೆಯಿದೆ. ಇದರಿಂದಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆ ಸಮಿತಿಯ ನಿರ್ಧಾರದಂತೇ ತಂಡದ ಆಯ್ಕೆ ನಡೆಯಲಿದೆ. ಈ ಸರಣಿ ಗಂಭೀರ್ ಪಾಲಿಗೂ ಮಾಡು ಇಲ್ಲವೇ ಮಡಿ ಸರಣಿಯಾಗಲಿದೆ.