ಪುಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದಿನಿಂದ ದ್ವಿತೀಯ ಟೆಸ್ಟ್ ಪ್ರಾರಂಭವಾಗುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಪುಣೆಯಲ್ಲಿ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಗೆ ಅವಕಾಶ ಸಿಗುತ್ತಾ ಎನ್ನುವುದೇ ಎಲ್ಲರ ಕುತೂಹಲವಾಗಿದೆ.
ಭಾರತಕ್ಕೆ ಈ ಪಂದ್ಯವನ್ನು ಗೆಲ್ಲುವುದು ಎರಡು ರೀತಿಯಿಂದ ಮುಖ್ಯವಾಗಿದೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ನಂ.1 ಸ್ಥಾನ ಉಳಿಸಿಕೊಳ್ಳಲು ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಇನ್ನೊಂದೆಡೆ ಈ ಸರಣಿ ಸೋಲು ತಪ್ಪಿಸಲೂ ಇಂದು ಗೆಲುವು ಅನಿವಾರ್ಯ.
ಹೀಗಾಗಿ ಇಂದಿನ ಪಿಚ್ ಭಾರತಕ್ಕೆ ಅನುಕೂಲಕರವಾಗಿಯೇ ನಿರ್ಮಿಸಲಾಗಿದೆ ಎನ್ನಲಾಗಿದೆ. ಸ್ಪಿನ್ ಸ್ನೇಹಿ ಟ್ರ್ಯಾಕ್ ಮಾಡಲಾಗಿದ್ದು, ಬ್ಯಾಟಿಂಗ್ ಗೂ ಸಹಕಾರಿಯಾಗಿರಲಿದೆ. ಸ್ಪಿನ್ ಗೆ ಕೊಂಚವೇ ಅನುಕೂಲ ಸಿಕ್ಕರೂ ಭಾರತದ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಜೋಡಿಯೆದುರು ಎದುರಾಳಿಗಳಿಗೆ ನಿಲ್ಲಲು ಕಷ್ಟವಾಗಲಿದೆ.
ಇನ್ನು, ಈ ಪಂದ್ಯಕ್ಕೆ ಮುಖ್ಯವಾಗಿ ಎಲ್ಲರ ಕಣ್ಣು ಕೆಎಲ್ ರಾಹುಲ್ ಮೇಲಿದೆ. ರಾಹುಲ್ ಇತ್ತೀಚೆಗೆ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ಸಂಕಷ್ಟದಲ್ಲಿ ತಂಡದ ಕೈ ಹಿಡಿಯುತ್ತಿಲ್ಲ ಎಂಬ ಅಪವಾದವಿದೆ. ಹೀಗಾಗಿ ಅವರನ್ನು ಹೊರಗಿಟ್ಟು ಶುಬ್ಮನ್ ಗಿಲ್ ಗೆ ಅವಕಾಶ ಕೊಡುತ್ತಾರಾ ನೋಡಬೇಕಿದೆ. ಜಿಯೋ ಸಿನಿಮಾ ಆಪ್ ನಲ್ಲಿ 9.30 ರಿಂದ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದು.