ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂದು ಸರ್ಫರಾಜ್ ಖಾನ್ ಮತ್ತು ರಿಷಭ್ ಪಂತ್ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಮಳೆಯಿಂದಾಗಿ ಭೋಜನ ವಿರಾಮಕ್ಕೆ ಮೊದಲೇ ಆಟ ನಿಂತಿದ್ದು ಭಾರತ 3 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿದೆ.
ಇದೀಗ ಭಾರತ ಮೊದಲ ಇನಿಂಗ್ಸ್ ಹಿನ್ನಡೆ ದಾಟಲು 12 ರನ್ ಗಳಿಸಬೇಕಿದೆ. ಆದರೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿರುವುದರಿಂದ ತಕ್ಷಣಕ್ಕೇ ಪಂದ್ಯ ಆರಂಭವಾಗುವುದು ಅನುಮಾನ. ಈ ನಡುವೆ ಸರ್ಫರಾಜ್ ಖಾನ್ 125 ರನ್ ಗಳ ಅದ್ಭುತ ಇನಿಂಗ್ಸ್ ಆಡಿದರೆ ಅವರಿಗೆ ಸಾಥ್ ನೀಡುತ್ತಿರುವ ರಿಷಭ್ 53 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇಬ್ಬರೂ ಇದುವರೆಗೆ ನಾಲ್ಕನೇ ವಿಕೆಟ್ ಗೆ 113 ರನ್ ಗಳ ಜೊತೆಯಾಟವಾಡಿದ್ದಾರೆ.
ಒಂದು ಹಂತದಲ್ಲಿ ರಿಷಭ್ ರನೌಟ್ ಆಗುವ ಸಾಧ್ಯತೆಯಿತ್ತು. ಆದರೆ ಸರ್ಫರಾಜ್ ಖಾನ್ ಕಿರುಚಿ, ಗಾಬರಿಯಿಂದ ಕುಪ್ಪಳಿಸಿ ರಿಷಭ್ ರನ್ನು ಸೇವ್ ಮಾಡಿದ್ದಾರೆ. ಬ್ಯಾಟಿಂಗ್ ಎಂಡ್ ನಲ್ಲಿದ್ದ ರಿಷಭ್ ಬಾಲ್ ಹೊಡೆದು ನಾನ್ ಸ್ಟ್ರೈಕರ್ ಎಂಡ್ ಕಡೆಗೆ ಓಡುತ್ತಿದ್ದರು. ಆದರೆ ಅಪಾಯ ಅರಿತ ಸರ್ಫರಾಜ್ ನಾನ್ ಸ್ಟ್ರೈಕರ್ ಎಂಡ್ ನಿಂದಲೇ ರಿಷಭ್ ರನ್ನು ಕೂಗಿ ಹಿಂದಕ್ಕೆ ಕಳುಹಿಸಿ ರಕ್ಷಿಸಿದರು. ಸರ್ಫರಾಜ್ ಎಷ್ಟು ಗಾಬರಿಯಾಗಿದ್ದರು ಎಂದರೆ ಪಿಚ್ ಮೇಲೆಯೇ ಕುಪ್ಪಳಿಸಿಯೇ ಬಿಟ್ಟಿದ್ದರು.
ಸರ್ಫರಾಜ್ ಕುಪ್ಪಳಿಸಿದ ಪರಿಗೆ ಡ್ರೆಸ್ಸಿಂಗ್ ರೂಂನಲ್ಲಿದ್ದ ರೋಹಿತ್ ಶರ್ಮಾ, ಆರ್ ಅಶ್ವಿನ್ ಸೇರಿದಂತೆ ಇತರೆ ಆಟಗಾರರು ಬಿದ್ದೂ ಬಿದ್ದೂ ನಗುವಂತಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಕ್ಷಕರಿಗೆ ಮನರಂಜನೆ ಒದಗಿಸುತ್ತಿದೆ.