ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರೀ ಘಟ್ಟದಲ್ಲಿರುವಾಗ ಮಳೆ ಸುರಿದಿದೆ. ಇದರಿಂದ ಟೀಂ ಇಂಡಿಯಾಕ್ಕೆ ಲಾಭವಾಗುವುದೋ, ನಷ್ಟವಾಗಬಹುದೋ ಇಲ್ಲಿದೆ ಲೆಕ್ಕಾಚಾರ.
ಮೊದಲ ಇನಿಂಗ್ಸ್ ನಲ್ಲಿ 356 ರನ್ ಗಳ ಬೃಹತ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 3 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಭಾರತ ಇದೀಗ ಕೇವಲ 12 ರನ್ ಗಳ ಹಿನ್ನಡೆಯಲ್ಲಿತ್ತು. ಸರ್ಫರಾಜ್ ಖಾನ್ 125, ರಿಷಭ್ ಪಂತ್ 53 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.
ಈಗ ಭಾರೀ ಮಳೆಯಾಗುತ್ತಿರುವುದರಿಂದ ಸದ್ಯಕ್ಕಂತೂ ಪಂದ್ಯ ಆರಂಭವಾಗುವ ನಿರೀಕ್ಷೆಯಿಲ್ಲ. ಭಾರತ ಇಂದು ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬರ ನೋಡಿದರೆ ಮತ್ತೆ 2001 ರ ಕೋಲ್ಕತ್ತಾ ಟೆಸ್ಟ್ ನ ಐತಿಹಾಸಿಕ ಕ್ಷಣ ಮರಳಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿತ್ತು.
ಆದರೆ ಈಗ ಮಳೆ ಬಂದಿರುವುದರಿಂದ ಆಟಕ್ಕೆ ತಡೆಯಾಗಿದೆ. ಹಾಗಿದ್ದರೂ ಮಳೆ ಬಂದಿರುವುದರಿಂದ ಭಾರತ ಅದರ ಲಾಭ ಪಡೆಯಬಹುದಾಗಿದೆ. ಸದ್ಯಕ್ಕೆ ಮೊದಲ ಇನಿಂಗ್ಸ್ ಹಿನ್ನಡೆ ದಾಟಿ ಭಾರತ 200 ರನ್ ಗಳ ಗುರಿ ನೀಡಿದರೂ ಮಳೆ ಬಂದಿರುವುದರಿಂದ ಪಿಚ್ ಒದ್ದೆಯಾಗಲಿದ್ದು, ನ್ಯೂಜಿಲೆಂಡ್ ಗೆ ಬ್ಯಾಟಿಂಗ್ ಕಷ್ಟವಾಗಲಿದೆ. ಆಗ ಭಾರತದ ಬೌಲರ್ ಗಳು ಉತ್ತಮ ದಾಳಿ ಸಂಘಟಿಸಿದರೆ ಪಂದ್ಯವನ್ನೇ ಭಾರತ ಗೆಲ್ಲಬಹುದು. ಆದರೆ ಭಾರತ ಇನ್ನೂ ಇನಿಂಗ್ಸ್ ಹಿನ್ನಡೆ ದಾಟಿಲ್ಲ. ಹೀಗಾಗಿ ಮಳೆ ಬಂದ ತಕ್ಷಣ ಪಿಚ್ ಮೊದಲಿನಂತೆ ವರ್ತಿಸದು. ಆಗ ಉಳಿದ 7 ವಿಕೆಟ್ ನಿಂದ 200 ರನ್ ಗಳಿಸುವುದು ಕಷ್ಟವಾಗಬಹುದು. ಒಂದು ವೇಳೆ ಇಂದು ಪೂರ್ತಿ ಆಟ ನಡೆಯದೇ ಇದ್ದರೆ ನಾಳೆ ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬಹುದು.