ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದಾಗ ಶತಕ ಸಿಡಿಸಿದ ಸರ್ಫರಾಜ್ ಖಾನ್ ಮೈದಾನ ತುಂಬಾ ಓಡಿ ಸಂಭ್ರಮಿಸಿದ್ದಾರೆ. ಅವರ ಸಂಭ್ರಮದ ಕ್ಷಣ ಎಲ್ಲರ ಕಣ್ಮನೆ ಸೆಳೆಯುವಂತಿದೆ.
ಭಾರತ ಮೊದಲ ಇನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಗೆ ಆಲೌಟ್ ಆಗಿತ್ತು. ಇತ್ತ ನ್ಯೂಜಿಲೆಂಡ್ 402 ರನ್ ಗಳಿಗೆ ಆಲೌಟ್ ಆಗಿತ್ತು. ಇದರಿಂದಾಗಿ ಭಾರತ 356 ರನ್ ಗಳ ಬೃಹತ್ ಹಿನ್ನಡೆ ಅನುಭವಿಸಿತ್ತು. ಇದರಿಂದಾಗಿ ತಂಡ ಇನಿಂಗ್ಸ್ ಅಂತರದಲ್ಲಿ ಸೋಲುವ ಭೀತಿಯಲ್ಲಿತ್ತು.
ಆದರೆ ಭಾರತದ ಬ್ಯಾಟಿಗರು ಎರಡನೇ ಇನಿಂಗ್ಸ್ ನಲ್ಲಿ ಅದ್ಭುತವಾಗಿ ಆಡಿದ್ದಾರೆ. ಯಶಸ್ವಿ ಜೈಸ್ವಾಲ್ 35, ರೋಹಿತ್ ಶರ್ಮಾ 52, ವಿರಾಟ್ ಕೊಹ್ಲಿ 70 ರನ್ ಗಳಿಸಿದ್ದಾರೆ. ಆದರೆ ಸರ್ಫರಾಜ್ ಖಾನ್ ಇದೀಗ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅದೂ 120 ಎಸೆತಗಳಲ್ಲಿ 106 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬೌಂಡರಿ ಮೂಲಕವೇ ಅವರು ತಮ್ಮ ಶತಕ ಪೂರೈಸಿದ್ದು, ಚೊಚ್ಚಲ ಶತಕ ಗಳಿಸುತ್ತಿದ್ದಂತೇ ಕುಣಿದು ಕುಪ್ಪಳಿಸಿದ್ದಾರೆ. ಅವರ ಸಂಭ್ರಮವನ್ನು ಡ್ರೆಸ್ಸಿಂಗ್ ರೂಂನಲ್ಲಿರುವ ಸಹ ಆಟಗಾರರೂ ನೋಡಿ ಖುಷಿಪಟ್ಟಿದ್ದಾರೆ.
ಭಾರತ ಇತ್ತೀಚೆಗಿನ ವರದಿ ಬಂದಾಗ 291 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದು ಕೇವಲ 65 ರನ್ ಗಳ ಹಿನ್ನಡೆ ದಾಟಿದರೆ ಸಾಕು. ಅದಾದ ಬಳಿಕ ಎದುರಾಳಿಗೆ ಗೆಲ್ಲಲು ಪೈಪೋಟಿಕರ ಮೊತ್ತ ಹಾಕಿ ಕೊಡಬೇಕಿದೆ. ಭಾರತದ ಮುಂದೆ ಸಂಕಟದ ದೊಡ್ಡ ಬೆಟ್ಟವೇ ಇತ್ತು. ಆದರೆ ಸರ್ಫರಾಜ್ ಶತಕ ಅದನ್ನು ಗುಡ್ಡದಷ್ಟು ಚಿಕ್ಕದಾಗಿ ಮಾಡಿದೆ. ಇದೀಗ ಭಾರತೀಯ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿದೆ.