ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ. ಕಳಪೆ ಮೊತ್ತಕ್ಕೆ ಆಲೌಟ್ ಆದ ಸಿಟ್ಟನ್ನು ರೋಹಿತ್ ಶರ್ಮಾ ಇಂದು ಫೀಲ್ಡಿಂಗ್ ನಲ್ಲಿ ಸಹ ಆಟಗಾರರ ಮೇಲೆ ತೋರಿಸುತ್ತಿದ್ದರು.
ಭಾರತದ ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ, ಸರ್ಫರಾಜ್, ಜಡೇಜಾ, ಕೆಎಲ್ ರಾಹುಲ್ ಸೇರಿದಂತೆ ಐವರು ಶೂನ್ಯಕ್ಕೆ ಔಟಾಗಿದ್ದರು. ರೋಹಿತ್ ಶರ್ಮಾ ಕೇವಲ 2 ರನ್ ಗಳಿಸಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ಕಳಪೆ ಮೊತ್ತಕ್ಕೆ ಆಲೌಟ್ ಆಗಿದೆ.
ಈ ಹತಾಶೆ ಇಂದು ಆಟಗಾರರ ಮುಖದಲ್ಲಿ ಸ್ಪಷ್ಟವಾಗಿತ್ತು. ಹತಾಶರಾದಂತೆ ಕಂಡುಬಂದ ನಾಯಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಮೈದಾನದಲ್ಲಿ ಎಲ್ಲರ ಮೇಲೂ ಕೂಗಾಡುತ್ತಲೇ ಇದ್ದರು. ರವೀಂದ್ರ ಜಡೇಜಾಗೆ ರೋಹಿತ್ ಶರ್ಮಾ ಕೆಟ್ಟದಾಗಿ ಬೈಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನೊಮ್ಮೆ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ನೀಡಿದ್ದ ಸುಲಭ ಕ್ಯಾಚ್ ಕೈ ಬಿಟ್ಟಿದ್ದಕ್ಕೆ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮೇಲೆ ಸಿಟ್ಟಾದರು. ಇಬ್ಬರೂ ಕ್ಯಾಚ್ ಹಿಡಿಯುವ ಪ್ರಯತ್ನವನ್ನೂ ಮಾಡದೇ ಇರುವುದು ರೋಹಿತ್ ಸಿಟ್ಟಿಗೆ ಕಾರಣವಾಯಿತು. ಬಳಿಕ ಲ್ಯಾಥಮ್ 15 ರನ್ ಗಳಿಗೆ ಕುಲದೀಪ್ ಯಾದವ್ ಗೆ ವಿಕೆಟ್ ಒಪ್ಪಿಸಿದರು. ಆದರೆ ನ್ಯೂಜಿಲೆಂಡ್ ಇತ್ತೀಚೆಗಿನ ವರದಿ ಬಂದಾಗ ಮೊದಲ ಇನಿಂಗ್ಸ್ ನಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿ ಸುಸ್ಥಿತಿಯಲ್ಲಿದೆ.