Select Your Language

Notifications

webdunia
webdunia
webdunia
webdunia

IND vs NZ Test: ಎರಡಂಕಿ ಮೊತ್ತಕ್ಕೆ ಆಲೌಟ್, ಟೀಂ ಇಂಡಿಯಾದ ಹೀನಾಯ ದಾಖಲೆಗಳ ಪಟ್ಟಿ

IND vs NZ Test

Krishnaveni K

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (14:34 IST)
Photo Credit: X
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 46 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ದಾಖಲೆ ಬರೆದಿದೆ.

ಭಾರತದ ಅಗ್ರಮಾನ್ಯ ಬ್ಯಾಟಿಗರೆನಿಸಿಕೊಂಡ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಸಾಲಾಗಿ ಶೂನ್ಯ ಸಂಪಾದನೆ ಮಾಡಿದರು. ಉಳಿದಂತೆ ಹಿಟ್ ಮ್ಯಾನ್ ಖ್ಯಾತಿಯ ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿದರು. ಇದ್ದವರಲ್ಲಿ ಎರಡಂಕಿ ಗಳಿಸಿದ್ದು ಎಂದರೆ ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಮಾತ್ರ. ಜೈಸ್ವಾಲ್ 13, ರಿಷಭ್ 20 ರನ್ ಗಳಿಸಿದರು.

ಭಾರತ ತಂಡದ ಈ ಹೀನಾಯ ಪ್ರದರ್ಶನಕ್ಕೆ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟಾಸ್ ಗೆದ್ದೂ ಭಾರತ ಈ ಒದ್ದೆ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಿರ್ಧಾರಕ್ಕೆ ಕಟು ಟೀಕೆ ವ್ಯಕ್ತವಾಗಿದೆ. ಈ ಮೂಲಕ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ ಮುಖಭಂಗ ಅನುಭವಿಸಿದೆ.

2020 ರಲ್ಲಿ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಸಿದ್ದು ಈವರೆಗಿನ ಕನಿಷ್ಠ ಮೊತ್ತವಾಗಿದೆ.  1974 ರಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್ ಗೆ ಆಲೌಟ್ ಆಗಿದ್ದು ಎರಡನೇ ಕನಿಷ್ಠ ಮೊತ್ತ. ಇತ್ತೀಚೆಗಿನ ವರ್ಷಗಳಲ್ಲೇ ಇಷ್ಟು ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಉದಾಹರಣೆಯೇ ಇರಲಿಲ್ಲ. ಅದೂ ಭಾರತೀಯ ಪಿಚ್ ನಲ್ಲಿ ಇದೇ ಮೊದಲು.

ಒಂದೇ ಇನಿಂಗ್ಸ್ ನಲ್ಲಿ ಐವರು ಡಕ್ ಔಟ್ ಆಗುವ ಮೂಲಕ ಎರಡನೇ ಗರಿಷ್ಠ ಡಕ್ ಔಟ್ ಕುಖ್ಯಾತಿಯನ್ನು ಟೀಂ ಇಂಡಿಯಾ ಆಟಗಾರರು ಪಡೆದುಕೊಂಡರು. ಏಷ್ಯಾ ಖಂಡದ ಪಿಚ್ ಗಳಲ್ಲೇ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಕುಖ್ಯಾತಿ ಭಾರತದ್ದಾಯಿತು. ಇದಕ್ಕೆ ಮೊದಲು ಪಾಕಿಸ್ತಾನ ವಿರುದ್ಧ ಫೈಸಲಾಬಾದ್ ನಲ್ಲಿ ವೆಸ್ಟ್ ಇಂಡೀಸ್ 53 ರನ್ ಗಳಿಗೆ ಆಲೌಟ್ ಆಗಿದ್ದು ದಾಖಲೆಯಾಗಿತ್ತು. ಇದೀಗ ಮೊದಲ ಇನಿಂಗ್ಸ್ ಆರಂಭಿಸಿರುವ ನ್ಯೂಜಿಲೆಂಡ್ ವಿಕೆಟ್ ನಷ್ಟವಿಲ್ಲದೇ 49 ರನ್ ಗಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

46ಕ್ಕೆ ಭಾರತ ಆಲೌಟ್‌: ಟೆಸ್ಟ್‌ನಲ್ಲಿ 3ನೇ ಅತೀ ಕಡಿಮೆ ರನ್‌ ಗಳಿಸಿದ ಟೀ ಇಂಡಿಯಾ