Publish Date: Wed, 16 Oct 2024 (09:49 IST)
Updated Date: Wed, 16 Oct 2024 (09:52 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ಭಾರೀ ಮಳೆಯಿಂದಾಗಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಆರಂಭವಾಗಬೇಕಾಗಿದ್ದ ಟೆಸ್ಟ್ ಪಂದ್ಯ ಇನ್ನೂ ಆರಂಭವಾಗಿಲ್ಲ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಭಾರೀ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ನಿನ್ನೆಯಷ್ಟು ಮಳೆ ಇಲ್ಲವಾದರೂ ಇಂದೂ ತುಂತುರು ಮಳೆ, ದಟ್ಟ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಿನ್ನೆ ಭಾರೀ ಮಳೆ ಸುರಿದಿದ್ದರಿಂದ ಮೈದಾನ ಸಂಪೂರ್ಣವಾಗಿ ಒದ್ದೆಯಾಗಿದೆ.
ಮೈದಾನ ಒಣಗಿಸಲು ತುಂತುರು ಮಳೆ ಬಿಡುತ್ತಿಲ್ಲ. ಇದರಿಂದಾಗಿ ಮೈದಾನಕ್ಕೆ ಹಾಕಿರುವ ಕವರ್ಸ್ ತೆಗೆಯಲಾಗಿಲ್ಲ. ಪಿಚ್ ನ್ನು ಮುಚ್ಚಲಾಗಿದ್ದರೂ ಹೊರಾವರಣ ಸಂಪೂರ್ಣವಾಗಿ ಒದ್ದೆಯಾಗಿದೆ. ಇಂದು ಪಂದ್ಯ ನಡೆಯುವ ಸಾಧ್ಯತೆಯಿಲ್ಲ ಎಂಬ ಮುನ್ಸೂಚನೆ ಮೊದಲೇ ಇದ್ದಿದ್ದರಿಂದ ಅಭಿಮಾನಿಗಳು ಮೈದಾನಕ್ಕೆ ಬರುವ ಆಸಕ್ತಿ ತೋರುತ್ತಿಲ್ಲ.
ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಮೂರು ದಿನಗಳ ಕಾಲ ಮತ್ತೆ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಈ ಪಂದ್ಯ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿಯಿದೆ. ಹಲವು ದಿನಗಳ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಟೆಸ್ಟ್ ಪಂದ್ಯವಾಗುತ್ತಿದೆ. ಆದರೆ ಪಂದ್ಯ ನಡೆಯದೇ ಇರುವುದು ಅಭಿಮಾನಿಗಳಿಗೆ ನಿರಾಸೆ ತಂದಿದೆ.