Publish Date: Tue, 15 Oct 2024 (10:26 IST)
Updated Date: Tue, 15 Oct 2024 (10:28 IST)
ಇಸ್ಲಾಮಾಬಾದ್: ಫಾರ್ಮ್ ನಲ್ಲಿಲ್ಲ ಅಂದ್ರೂ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಬೆಂಬಲಿಸಲ್ವಾ? ಹಾಗೇ ಬಾಬರ್ ಅಜಮ್ ರನ್ನೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲಿಸಬೇಕು.. ಹೀಗಂತ ಪಾಕ್ ಕ್ರಿಕೆಟಿಗ ಫಕರ್ ಜಮಾನ್ ನೀಡಿರುವ ಹೇಳಿಕೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.
ಆರಂಭದಿಂದಲೂ ಪಾಕಿಸ್ತಾನಿಯರು ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಸುತ್ತಲೇ ಬಂದಿದ್ದಾರೆ. ಅಸಲಿಗೆ ಕೊಹ್ಲಿ ಮಾಡಿದ ಸಾಧನೆಯ ಶಿಖರವನ್ನು ತಲುಪುವುದೂ ಬಾಬರ್ ಗೆ ಸುಲಭವಲ್ಲ. ಹಾಗಿದ್ದರೂ ಈಗಲೂ ಬಾಬರ್ ರನ್ನು ಕೊಹ್ಲಿಗೆ ಹೋಲಿಸುವುದು ಮಾತ್ರ ಬಿಟ್ಟಿಲ್ಲ.
ಇದು ಎಷ್ಟರಮಟ್ಟಿಗೆ ಎಂದರೆ ಈಗ ಫಾರ್ಮ್ ಕಳೆದುಕೊಂಡಿರುವ ವಿಚಾರದಲ್ಲೂ ಕೊಹ್ಲಿಗೆ ಬಾಬರ್ ರನ್ನು ಕಂಪೇರ್ ಮಾಡಲಾಗುತ್ತಿದೆ. ಕಳಪೆ ಫಾರ್ಮ್ ಹಿನ್ನಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಬಾಬರ್ ಅಜಮ್, ನಸೀಂ ಶಾ ಮತ್ತು ಶಾಹಿನ್ ಶಾರನ್ನು ಹೊರಗಿಡಲಾಗಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಫಕರ್ ಜಮಾನ್, ವಿರಾಟ್ ಕೊಹ್ಲಿಯನ್ನು ಬೆಂಬಲಿಸುವಂತೆ ಬಾಬರ್ ಅಜಮ್ ರನ್ನೂ ಕೈ ಬಿಡದೇ ಬೆಂಬಲಿಸಬೇಕು. ಬಾಬರ್ ಅತ್ಯುತ್ತಮ ಬ್ಯಾಟಿಗ. ಅವರನ್ನು ಹೊರಿಗಿಟ್ಟರೆ ನಿಮ್ಮ ಅತ್ಯುತ್ತಮ ಆಟಗಾರನನ್ನು ಹೊರಗಿಟ್ಟಂತೆ. 2020-23 ರವರೆಗೆ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ನಲ್ಲಿದ್ದರೂ ಅವರನ್ನು ತಂಡದಿಂದ ಕೈ ಬಿಟ್ಟಿರಲಿಲ್ಲ. ಹಾಗೆಯೇ ಬಾಬರ್ ರನ್ನೂ ಬಿಡಬಾರದು ಎಂದಿದ್ದರು. ಆದರೆ ಅವರ ಹೇಳಿಕೆ ಈಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು, ನೆಟ್ಟಿಗರು ಕೊಹ್ಲಿಗೆ ಜೊತೆ ಬಾಬರ್ ಕಂಪೇರ್ ಮಾಡಿರುವುದನ್ನು ಟ್ರೋಲ್ ಮಾಡಿದ್ದಾರೆ.