ಮುಂಬೈ: ಬಾಂಗ್ಲಾದೇಶ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ವಿದೇಶಕ್ಕೆ ವಿಮಾನವೇರಿದ್ದಾರೆ.
ವಿರಾಟ್ ಕೊಹ್ಲಿ ಇತ್ತೀಚೆಗಿನ ದಿನಗಳಲ್ಲಿ ಲಂಡನ್ ನಿವಾಸಿಯಾಗಿದ್ದಾರೆ. ಕೇವಲ ಕ್ರಿಕೆಟ್ ಸರಣಿಗಳಿದ್ದರೆ ಮಾತ್ರ ಭಾರತಕ್ಕೆ ಮರಳುತ್ತಾರೆ. ಇಲ್ಲವಾದರೆ ಪತ್ನಿ, ಮಕ್ಕಳೊಂದಿಗೆ ಲಂಡನ್ ನಲ್ಲಿಯೇ ಸೆಟಲ್ ಆಗಿದ್ದಾರೆ. ಇದೀಗ ಬಾಂಗ್ಲಾದೇಶ ಸರಣಿಗೆ ನಾಲ್ಕು ದಿನಗಳ ಮೊದಲು ಭಾರತಕ್ಕೆ ಬಂದಿಳಿದಿದ್ದ ವಿರಾಟ್ ಕೊಹ್ಲಿ ಮತ್ತೆ ಲಂಡನ್ ವಿಮಾನವೇರಿದ್ದಾರೆ.
ಮಗ ಅಕಾಯ್ ಜನಿಸಿದ ಮೇಲೆ ವಿರಾಟ್ ದಂಪತಿ ಲಂಡನ್ ನಲ್ಲಿಯೇ ನೆಲೆಸುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ರೋಹಿತ್ ಶರ್ಮಾ ಸಮಯ ಸಿಕ್ಕಾಗಲೆಲ್ಲಾ ಪತ್ನಿ, ಮಗಳ ಜೊತೆ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ಶ್ರೀಲಂಕಾ ಏಕದಿನ ಸರಣಿ ಬಳಿಕ ಸುದೀರ್ಘ ಬಿಡುವಿನ ಅವಧಿಯಲ್ಲಿ ಪ್ರವಾಸ ಮಾಡಿದ್ದ ರೋಹಿತ್ ಈಗ ಮತ್ತೆ ಟೂರ್ ಮಾಡುತ್ತಿದ್ದಾರೆ.
ಪತ್ನಿ ಜೊತೆ ದುಬೈ ವಿಮಾನವೇರಿರುವ ರೋಹಿತ್ ಶರ್ಮಾ ಅಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ದುಬೈನಲ್ಲಿ ಜಾಲಿಯಾಗಿ ಸಮಯ ಕಳೆಯುತ್ತಿರುವುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.ಅಕ್ಟೋಬರ್ 16 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆಗೆ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.