Publish Date: Fri, 27 Sep 2024 (13:16 IST)
Updated Date: Fri, 27 Sep 2024 (13:22 IST)
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೈದಾನ ಸಿಬ್ಬಂದಿಯೊಬ್ಬರು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.
ಇಂದು ಮಳೆಯಿಂದಾಗಿ ಪಂದ್ಯ ಕೊಂಚ ತಡವಾಗಿ ಆರಂಭವಾಯಿತು. ಮಳೆ ಬಿಟ್ಟ ಮೇಲೆ ಮೈದಾನ ಸಿಬ್ಬಂದಿಗಳು ಕವರ್ಸ್ ತೆಗೆದು ಪಂದ್ಯಕ್ಕೆ ಅಣಿಗೊಳಿಸುತ್ತಿದ್ದರು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಕಿಟ್ ತೆಗೆದುಕೊಂಡು ಅಭ್ಯಾಸ ನಡೆಸಲು ಮೈದಾನದಲ್ಲಿರುವ ಪಿಚ್ ನತ್ತ ಬರುತ್ತಿದ್ದರು.
ಎಲ್ಲಾ ಸಿಬ್ಬಂದಿಗಳೂ ದಿಗ್ಗಜ ಕ್ರಿಕೆಟಿಗನನ್ನು ನೋಡುತ್ತಾ ದೂರದಿಂದಲೇ ಹಾಯ್ ಎಂದು ಮೈಮರೆತು ನಿಂತಿದ್ದರೆ ಓರ್ವ ಮೈದಾನ ಸಿಬ್ಬಂದಿ ನೇರವಾಗಿ ಓಡಿ ಬಂದು ಕೊಹ್ಲಿ ಕಾಲಿಗೆರಗಿದ್ದಾನೆ. ಸಡನ್ ಆಗಿ ಮೈದಾನ ಸಿಬ್ಬಂದಿ ತನ್ನ ಕಾಲಿಗೆ ನಮಸ್ಕರಿಸಿದ್ದು ನೋಡಿ ಕೊಹ್ಲಿಗೂ ಕೊಂಚ ಗಲಿಬಿಲಿಯಾಗಿದೆ.
ಆದರೆ ಅವರಿಗೆ ಇಂತಹದ್ದೆಲ್ಲಾ ಈಗ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ತಕ್ಷಣವೇ ಸಾವರಿಸಿಕೊಂಡು ಆತನನ್ನು ಹಿಡಿದೆತ್ತಿದ್ದು, ಮುನ್ನಡೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೊಹ್ಲಿಯನ್ನು ದೇವರಂತೆ ನೋಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.