ಇಸ್ಲಾಮಾಬಾದ್: ಮುಂದಿನ ವರ್ಷ ಮಾರ್ಚ್ ನಲ್ಲಿ ತನ್ನ ನೆಲದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾವನ್ನು ಕರೆತರಲು ಪಾಕಿಸ್ತಾನ ಶತಾಯ ಗತಾಯ ಪ್ರಯತ್ನ ನಡೆಸಿದೆ.
ಮಾರ್ಚ್ ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದನ್ನು ಭಾರತ ಇನ್ನೂ ಖಚಿತಪಡಿಸಿಲ್ಲ. ಭಾರತ ಪಾಲ್ಗೊಳ್ಳುವಿಕೆ ಖಚಿತಪಡಿಸದೇ ಪಾಕಿಸ್ತಾನಕ್ಕೆ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲ.
ಅಷ್ಟೇ ಅಲ್ಲದೆ, ಭಾರತ ಬಾರದೇ ಇದ್ದರೆ ಪಾಕಿಸ್ತಾನಕ್ಕೆ ಆದಾಯದ ವಿಚಾರದಲ್ಲಿ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ಭಾರತವನ್ನು ಹೇಗಾದರೂ ಕರೆತರಲು ಪಾಕಿಸ್ತಾನ ಪ್ರಯತ್ನ ನಡೆಸುತ್ತಿದೆ. ಭಾರತದ ಅನುಕೂಲಕ್ಕಾಗಿ ಟೀಂ ಇಂಡಿಯಾ ಪಂದ್ಯಗಳನ್ನು ಭಾರತಕ್ಕೆ ಸಮೀಪವಿರುವ ಲಾಹೋರ್ ನಲ್ಲಿ ನಡೆಸಲು ಈಗಾಗಲೇ ಆಫರ್ ನೀಡಿತ್ತು.
ಅದರ ಜೊತೆಗೆ ಈಗ ಟೀಂ ಇಂಡಿಯಾ ಪ್ರತೀ ಪಂದ್ಯವಾಡಿದ ಬಳಿಕ ಭಾರತದ ಚಂಢೀಘಡ ಅಥವಾ ದೆಹಲಿಗೆ ವಾಪಸ್ ಆಗಲು ಅವಕಾಶ ನೀಡುವುದಾಗಿ ಹೇಳಿದೆ. ಪಾಕಿಸ್ತಾನದಲ್ಲೇ ಉಳಿದುಕೊಳ್ಳಲು ಭದ್ರತೆ ಅಡ್ಡಿಯಾಗುವುದಾದರೆ ಪ್ರತೀ ಪಂದ್ಯದ ಬಳಿಕ ಭಾರತಕ್ಕೇ ಹಿಂದಿರುಗಿ ಎಂದು ಬಿಸಿಸಿಐಗೆ ಪತ್ರವೊಂದನ್ನು ಬರೆದಿದೆ. ಆದರೆ ಬಿಸಿಸಿಐ ಮಾತ್ರ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ.