ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ 99 ರನ್ ಗಳಿಗೆ ಔಟಾದ ರಿಷಭ್ ಪಂತ್ ದಾಖಲೆ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಭ್ ಅದ್ಭುತ ಬ್ಯಾಟಿಗ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಹೊಡೆಬಡಿಯ ಆಟದ ಮೂಲಕ ಪಂದ್ಯವನ್ನೇ ತಿರುಗಿಸಬಲ್ಲ ಛಾತಿಯುಳ್ಳವರು. ಆದರೆ ಅವರ ಈ ಶೈಲಿ ಆಟದಿಂದಾಗಿಯೇ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸಿರುವುದಕ್ಕಿಂತಲೂ 90 ರ ಹೊಸ್ತಿಲಲ್ಲಿ ಔಟಾಗಿದ್ದೇ ಜಾಸ್ತಿ.
2018 ರಲ್ಲಿ ಮೊದಲನೆಯ ಬಾರಿಗೆ ಅವರು ನರ್ವಸ್ ನೈಂಟಿಯಾಗಿ ಔಟಾಗಿದ್ದರು. ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 92, ಅದೇ ವರ್ಷ ಮತ್ತೊಮ್ಮೆವಿಂಡೀಸ್ ವಿರುದ್ಧ 92, 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 97, 2021 ರಲ್ಲಿ ಇಂಗ್ಲೆಂಡ್ ವಿರುದ್ಧ 91, 2022 ರಲ್ಲಿ ಶ್ರೀಲಂಕಾ ವಿರುದ್ಧ 96, 2022 ರಲ್ಲಿ ಬಾಂಗ್ಲಾದೇಶ ವಿರುದ್ಧ 93 ಮತ್ತು ಇಂದು ನ್ಯೂಜಿಲೆಂಡ್ ವಿರುದ್ಧ 99 ರನ್ ಗಳಿಸಿ ಔಟಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಭ್ 6 ಶತಕ ಸಿಡಿಸಿದ್ದಾರೆ. ಆದರೆ 90 ರ ಹೊಸ್ತಿಲಲ್ಲಿ 7 ಬಾರಿ ಔಟಾಗಿದ್ದಾರೆ. ಆ ಮೂಲಕ ಶತಕಕ್ಕಿಂತಲೂ 90 ರನ್ ಗಳ ಹೊಸ್ತಿಲಲ್ಲಿ ಔಟಾಗಿದ್ದೇ ಹೆಚ್ಚು.
ಇಂದು 99 ರಲ್ಲಿ ಔಟಾಗುವ ಮೂಲಕ ಇಡೀ ಮೈದಾನವೇ ಶಾಕ್ ಗೊಳಗಾಗುವಂತೆ ಮಾಡಿದರು. ಈ ರೀತಿ ಟೆಸ್ಟ್ ಕ್ರಿಕೆಟ್ ನಲ್ಲಿ 99 ರನ್ ಗೆ ಔಟಾದ ವಿಶ್ವದ ಐದನೇ ಮತ್ತು ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟಿಗ ಎಂಬ ದಾಖಲೆ ಮಾಡಿದರು. ಇದಕ್ಕೆ ಮೊದಲು ಭಾರತದ ಪರ ಧೋನಿ 99 ರನ್ ಗೆ ಔಟಾಗಿದ್ದರು.