ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲೂ ವಿಫಲರಾಗಿರುವ ಕನ್ನಡಿಗ ಬ್ಯಾಟಿಗ ಕೆಎಲ್ ರಾಹುಲ್ ರನ್ನು ಮುಂದಿನ ಪಂದ್ಯಕ್ಕೆ ಆಡುವ ಬಳಗದಿಂದಲೇ ಹೊರಗಿಟ್ಟರೂ ಅಚ್ಚರಿಯಿಲ್ಲ.
ಕೆಎಲ್ ರಾಹುಲ್ ಗೆ ಈಗಾಗಲೇ ನಾಯಕ ರೋಹಿತ್ ಶರ್ಮಾ ಇದು ಕೊನೆಯ ಅವಕಾಶ ಎನ್ನುವ ರೀತಿಯಲ್ಲಿ ಬಾಂಗ್ಲಾದೇಶ ಸರಣಿಯಲ್ಲಿ ಆಡಿದ್ದರು. ಇತ್ತೀಚೆಗಿನ ದಿನಗಳಲ್ಲಿ ಅವರಿಂದ ತಂಡಕ್ಕೆ ಬೇಕಾಗಿದ್ದಾಗ ಒಂದೇ ಒಂದು ಉತ್ತಮ ಇನಿಂಗ್ಸ್ ಬಂದಿಲ್ಲ. ಈ ಬಾರಿ ಅವರು ತವರು ಕ್ರೀಡಾಂಗಣದಲ್ಲೇ ಮುಗ್ಗರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಾದರೂ ಅವರು ಉತ್ತಮ ಆಟವಾಡಬಹುದು ಎಂದು ನಿರೀಕ್ಷೆಯಾಗಿತ್ತು. ಆದರೆ ತಂಡ ಸಂಕಷ್ಟದಲ್ಲಿದ್ದಾಗಲೂ ಆಡಿಲ್ಲ. ಇತ್ತ ಅವರ ಫೀಲ್ಡಿಂಗ್ ಕೂಡಾ ಕಳಪೆಯಾಗಿತ್ತು. ಹೀಗಾಗಿ ಅವರನ್ನು ಮುಂದಿನ ಪಂದ್ಯಕ್ಕೆ ಕೈ ಬಿಟ್ಟರೂ ಅಚ್ಚರಿಯಿಲ್ಲ.
ಯಾಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಈಗಾಗಲೇ ಸರ್ಫರಾಜ್ ಖಾನ್ ಅದ್ಭುತ ಶತಕದ ಮೂಲಕ ತಮ್ಮ ಸ್ಥಾನ ಭದ್ರಪಡಿಸಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕಿತ್ತು ಹಾಕುವಂತೆಯೇ ಇಲ್ಲ. ಇದರ ಜೊತೆಗೆ ಮುಂದಿನ ಪಂದ್ಯಕ್ಕೆ ಶುಬ್ಮನ್ ಗಿಲ್ ತಂಡಕ್ಕೆ ಬಂದರೆ ಕೆಎಲ್ ರಾಹುಲ್ ಗೆ ಕೊಕ್ ನೀಡುವ ಸಾಧ್ಯತೆಯಿದೆ.