ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ರಿಷಭ್ ಪಂತ್ ಮತ್ತು ಶುಬ್ಮನ್ ಗಿಲ್ ಆಸರೆಯಾದರೆ ಆಡುವ ಬಳಗದಿಂದ ಹೊರಬಿದ್ದಿರುವ ಕೆಎಲ್ ರಾಹುಲ್ ವಾಟರ್ ಬಾಯ್ ಆದರು.
ಕಳಪೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಕಳೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿಲ್ಲ. ಹೀಗಾಗಿ ಅವರು ತಂಡದ ಆಟಗಾರರಿಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಟೆಸ್ಟ್ ಪಂದ್ಯದ ವಿಚಾರಕ್ಕೆ ಬಂದರೆ ಇಂದು ಮೂರನೇ ಟೆಸ್ಟ್ ಪಂದ್ಯದ ದ್ವಿತೀಯ ದಿನವಾಗಿದ್ದು ಭಾರತ ಮೊದಲ ಇನಿಂಗ್ಸ್ ನಲ್ಲಿ ಭೋಜನ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ನಿನ್ನೆ 84 ರನ್ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾಗಿದ್ದು ಶುಬ್ಮನ್ ಗಿಲ್ ಮತ್ತು ರಿಷಭ್ ಪಂತ್ ಜೊತೆಯಾಟ.
ಸಂಕಷ್ಟದಲ್ಲಿದ್ದಾಗ ಎಂದಿನಂತೇ ಬೀಡುಬೀಸಾದ ಬ್ಯಾಟಿಂಗ್ ಮೂಲಕ ಭಾರತಕ್ಕೆ ಆಸರೆಯಾದ ರಿಷಭ್ ಪಂತ್ ಒಟ್ಟು 59 ಎಸೆತಗಳಿಂದ 60 ರನ್ ಗಳಿಸಿದ್ದಾಗ ಔಟಾದರು. ಆದರೆ ಇದಕ್ಕೆ ಮೊದಲು ಗಿಲ್ ಜೊತೆ 96 ರನ್ ಗಳ ಮಹತ್ವದ ಜೊತೆಯಾಟವಾಡಿದರು. ಈ ನಡುವೆ ಗಿಲ್ 106 ಎಸೆತಗಳಿಂದ 70 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವ ರವೀಂದ್ರ ಜಡೇಜಾ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ ನಲ್ಲಿ 235 ರನ್ ಗಳಿಸಿತ್ತು. ಭಾರತ ಈಗ ಮೊದಲ ಇನಿಂಗ್ಸ್ ಮೊತ್ತ ದಾಟಲು 40 ರನ್ ಗಳಿಸಬೇಕಿದೆ. ಇನ್ನೂ ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್ ಕ್ರೀಸ್ ಗೆ ಬರಬೇಕಿದೆ. ಹೀಗಾಗಿ ಸದ್ಯದ ಪರಿಸ್ಥಿತಿ ನೋಡಿದರೆ ಭಾರತ ಮುನ್ನಡೆ ಸಾಧಿಸಬಹುದು ಎಂಬ ವಿಶ್ವಾಸ ಮೂಡಿದೆ.