ಮೆಲ್ಬೊರ್ನ್: ಆಸ್ಟ್ರೇಲಿಯಾ ಎ ತಂಡಗಳ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದ ಪರವಾಗಿ ಆಡುತ್ತಿರುವ ಕೆಎಲ್ ರಾಹುಲ್ ರದ್ದು ಅದೇ ರಾಗ ಅದೇ ಹಾಡು ಎಂಬಂತಾಗಿದೆ.
ಕೆಎಲ್ ರಾಹುಲ್ ಇತ್ತೀಚೆಗೆ ಕಳಪೆ ಫಾರ್ಮ್ ನಲ್ಲಿದ್ದರು. ಆ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಮುಂಬರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಒಬ್ಬ ಆರಂಭಿಕ ಆಟಗಾರನ ಅವಶ್ಯಕತೆಯಿದೆ. ಈ ಕಾರಣಕ್ಕೆ ಈ ಪಂದ್ಯಕ್ಕೆ ಮುನ್ನ ಅವರು ಫಾರ್ಮ್ ಗೆ ಬರುವುದು ಮುಖ್ಯವಾಗಿದೆ. ಆ ಕಾರಣಕ್ಕೆ ಅವರನ್ನು ಎ ತಂಡದ ವಿರುದ್ಧ ಆಡಿಸಲಾಗುತ್ತಿದೆ.
ಆದರೆ ವಿಪರ್ಯಾಸವೆಂದರೆ ಕೆಎಲ್ ರಾಹುಲ್ ಇನ್ನೂ ಫಾರ್ಮ್ ಗೆ ಬಂದಿಲ್ಲ. ಎ ತಂಡದ ವಿರುದ್ಧದ ಪಂದ್ಯದಲ್ಲಿ ರಾಹುಲ್ ಕೇವಲ 4 ರನ್ ಗಳಿಸಿ ಔಟಾಗಿದ್ದಾರೆ. ಒಟ್ಟು ನಾಲ್ಕು ಎಸೆತ ಎದುರಿಸಿದ ರಾಹುಲ್ ಒಂದು ಬೌಂಡರಿ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಕೇವಲ ರಾಹುಲ್ ಮಾತ್ರವಲ್ಲ, ಭಾರತ ತಂಡದ ಭವಿಷ್ಯದ ತಾರೆ ಎನಿಸಿಕೊಂಡಿರುವ ಋತುರಾಜ್ ಗಾಯಕ್ ವಾಡ್, ಸಾಯಿ ಸುದರ್ಶನ್ ಕೂಡಾ ವಿಫಲರಾಗಿದ್ದಾರೆ.
ಆದರೆ ಕರ್ನಾಟಕ ಮೂಲದ ಇನ್ನೊಬ್ಬ ಆಟಗಾರ ದೇವದತ್ತ ಪಡಿಕ್ಕಲ್ 26 ರನ್ ಗಳಿಸಿದರು. ಹಾಗಿದ್ದರೂ ಹಿರಿಯರ ಕಳಪೆ ಬ್ಯಾಟಿಂಗ್ ಕಿರಿಯರಲ್ಲೂ ಮುಂದುವರಿದಿದ್ದು ಭಾರತ ಕೇವಲ 65 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.